Saturday, 1 October 2016

ಕಾವೇರಿ

ಈ ಋತುಮಾನದ ನೀರಿಗಾಗಿ ಶುರುವಾದ ಕಾವೇರಿ ತಗಾದೆ, ಅಂತಿಮವಾಗಿ ಕಾವೇರಿಯ ಜೀವಮಾನದಲ್ಲಿಯೇ ಕಾವೇರಿ ನಮ್ಮದಲ್ಲ ಎಂಬಲ್ಲಿಗೆ ಬಂದು ನಿಂತಿದೆ. ರಂಗದ ಮೇಲೆ ಪ್ರದರ್ಶನಗೊಳ್ಳುವ ನಾಟಕ ರೂಪವೊಂದು ಹೊಸ ನೋಡುಗನಿಗೆ ಕುತೂಹಲ ಕೆರಳಿಸುತ್ತಾ ಸಾಗಿ ಅನಿರೀಕ್ಷಿತ ದೃಶ್ಯವೊಂದರಲ್ಲಿ ಅಂತಿಮಗೊಳ್ಳುವ ಹಾಗೆ ಕಂಡರೂ ಅದೆಲ್ಲ ಮೊದಲೇ ಪ್ರಕಟಿತ ಕೃತಿಯೊಂದರಿಂದ ಪೂರ್ವ ನಿರ್ಧರಿತವಾಗಿರುತ್ತದೆಯಷ್ಟೇ. ಹಾಗೇ ಈ ನಮ್ಮ ಕಾವೇರಿ ತಗಾದೆಯೂ ನೀರು ಬೇಕು, ನೀರು ಬೇಕು ಎಂಬ ಬೇಡಿಕೆಯಿಂದ ಪ್ರಾರಂಭವಾಗಿ ಕಡೆಗೆ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆಯ ಆದೇಶದೊಂದಿಗೆ (ಅದೂ ಕೇವಲ ನಾಲ್ಕು ದಿನಗಳೊಳಗೆ) ಬೇರೆಯದೇ ರೂಪದಲ್ಲಿ ಬಂದು ನಿಂತಿದೆ. ತಮಿಳ್ನಾಡಿನ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಾಗಿದೆ.
    ಆದರೆ ಕೂಲಂಕುಶವಾಗಿ ನೋಡಿದಾಗ ಇದೆಲ್ಲ ಒಂದು ಪೂರ್ವ ನಿರ್ಧರಿತ ಘಟನೆಯ ಹಾಗೆ ಕಾಣುತ್ತದೆ. ತಮಿಳ್ನಾಡು ಹಲವಾರು ಟಿ.ಎಂ.ಸಿ. ಗಳ ನೀರಿಗಾಗಿ ಬೇಡಿಕೆ ಸಲ್ಲಿಸುತ್ತದೆ. ಕಡೆಗೆ ದಿನಕ್ಕೆ ಇಪ್ಪತ್ತು ಸಾವಿರ ಕ್ಯೂಸೆಕ್ಸ್ ಆದರೂ ಬಿಡಬೇಕೆನ್ನುತ್ತದೆ. ಕರ್ನಾಟಕ ಹತ್ತು ಸಾವಿರಕ್ಕೆ ತಯಾರಿರುತ್ತದೆ. ಕೊನೆಯಲ್ಲಿ ಹದಿನೈದು ಸಾವಿರ ಆದೇಶವಾಗುತ್ತದೆ.  ಕರ್ನಾಟಕ ಹದಿನೈದು ಸಾವಿರ ಕ್ಯೂಸೆಕ್ಸ್ -ದಿನಕ್ಕೆ- ನೀರು ಹರಿಸುತ್ತಲೇ ಅದರ ಪುನರ್‍ ಪರಿಶೀಲನೆ ಅರ್ಜಿ ಸಲ್ಲಿಸುತ್ತದೆ. ಆದರೆ ಆಗ ಮೊದಲು ಬಿಡಬೇಕಾಗಿದ್ದಕ್ಕಿಂತ ಹೆಚ್ಚು ನೀರು ಬಿಡಲು ಹೇಳಲಾಗುತ್ತದೆ. ನಂತರ ಉಸ್ತುವಾರಿ ಸಮಿತಿ ದಿನವೊಂದಕ್ಕೆ ಮೂರು ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತ ಹೇಳುತ್ತದೆ. ಈ ಸಂದರ್ಭದಲ್ಲಿ ತನ್ನ ನಿರ್ದೇಶನದನ್ವಯ ರಚನೆಯಾದ ಉಸ್ತುವಾರಿ ಸಮಿತಿಯ ಆದೇಶವನ್ನೂ ಮಾರ್ಪಡಿಸಿ ಅದನ್ನು ಮೀರಿ ಆರು ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆಜ್ಞೆ ಬರುತ್ತದೆ. ಆಗ ಕರ್ನಾಟಕ ವಿಧಾನ ಮಂಡಲಗಳು ಕುಡಿಯುವುದಕ್ಕೆ ಬಿಟ್ಟು ಇನ್ಯಾವುದಕ್ಕೂ ನೀರು ಹರಿಸಬಾರದು ಎಂದು ತೀರ್ಮಾನ ಕೈಗೊಳ್ಳುತ್ತವೆ.
     ನಂತರ ಪ್ರತಿ ಕ್ಷಣ ಎಲ್ಲರ ಚಿತ್ತವೂ ಈ ಸುತ್ತುವುದು ನ್ಯಾಯಾಲಯ ನಿಂದನೆಯ ವಿಚಾರವೇ ! ಈ ವಿಧಾನಮಂಡಲದ ತೀರ್ಮಾನ ನ್ಯಾಯಾಂಗ ನಿಂದನೆಯಾಗುತ್ತದೆಯೇ ? ಹಾಗಾದರೆ ಏನಾಗುತ್ತದೆ ? ಸರ್ಕಾರದ ವಜಾವೇ ? ಮುಖ್ಯಸ್ಥರ ಬಂಧನವೇ ? ರಾಷ್ಟ್ರಪತಿ ಆಡಳಿತವೇ ? ನಮ್ಮ ಜಲಾಶಯಗಳ ಸುತ್ತ ಮಿಲಿಟರಿ ಕಾವಲು ಹಾಕಿ ನೀರು ಬಿಡಲಾಗುತ್ತದೆಯೇ ? ಆದರೆ ಅದು ಗಣನೆಗೇ ಬರದೆ ಇಡೀ ಪ್ರಕರಣದಲ್ಲಿ ಎಲ್ಲೂ ಬೇಡಿಕೆಯಲ್ಲಿಲ್ಲದ ಕಾವೇರಿ ನೀರು ನಿರ್ವಹಣಾ ಮಂಡಳಿಯ ರಚನೆ ಮಾಡಬೇಕಾಗಿ ಬರುತ್ತದೆ.
    ಈ ಮಧ್ಯ ಕೇಂದ್ರದ ಮಧ್ಯಸ್ಥಿಕೆಯಲ್ಲೊಂದು ಸಭೆ, ಕರ್ನಾಟಕದಿಂದ ವಸ್ತು ಸ್ಥಿತಿ ತಿಳಿಯಿರಿ ಎಂಬ ವಾದ, ತಮಿಳ್ನಾಡಿನದು ಗೊತ್ತಿರುವಂತೆಯೇ ವಿರೋಧ, ಮುರಿದು ಬಿದ್ದ ಸಭೆ ಎಂಬ ಫಲ ಶ್ರುತಿ.
    ಕರ್ನಾಟಕ ಮೊದಲಿನಿಂದಲೂ ಕೇಂದ್ರದ ಮಧ್ಯಸ್ಥಿಕೆಗೆ ಬೇಡಿಕೆ ಇಟ್ಟಿತ್ತು. ಪ್ರಧಾನ ಮಂತ್ರಿಯವರು ನಮ್ಮ ಮುಖ್ಯ ಮಂತ್ರಿಗೆ ಭೇಟಿಗೇ ಅವಕಾಶ ಕೊಡಲಿಲ್ಲ. ಕಡೆಗೂ ಕೇಂದ್ರ ಮಧ್ಯಸ್ಥಿಕೆ ವಹಿಸಬೇಕಾಗಿ ಬಂದಾಗ ಕರ್ನಾಟಕ ಒಂದು ನಿಟ್ಟುಸಿರು ಬಿಟ್ಟಿತು. ಆದರೂ ಅದೂ ನಾಟಕವೇ ಆಯಿತೇ ? 'ನಮ್ಮ ಮಧ್ಯಸ್ತಿಕೆಯ ಸಭೆ ಅಪೂರ್ಣ' ಎಂದು ಕೇಂದ್ರ ಹೇಳಿದಾಗಲೂ ಅದಕ್ಕೆ ಮತ್ತಷ್ಟು ಸಮಯ ಕೊಡದೇ ಇನ್ನು ನಾಲ್ಕು ದಿನದೊಳಗೆ ನಿರ್ವಹಣಾ ಮಂಡಳಿ ರಚನೆ ಸಾಧ್ಯವೇ ಎಂಬ ಪ್ರಶ್ನೆ. ಅದೇ ಮೊದಲು ನಾಲ್ಕು ವಾರಗಳ ಗಡುವು ನೀಡಲಾಗಿತ್ತು. ಈಗ ನಾಲ್ಕು ದಿನದಲ್ಲಿ ಮಾಡಿ ಎಂದರೆ ಖಂಡಿತ ಸಾಧ್ಯವಿಲ್ಲ ಎಂಬ ನಮ್ಮೆಲ್ಲರ ಅನಿಸಿಕೆಯನ್ನು ಸುಳ್ಳಾಗಿಸಿ ಒಪ್ಪಲಾಗುತ್ತದೆ.
    ಕಾವೇರಿ ನ್ಯಾಯ ಮಂಡಳಿಯ ಅಂತಿಮ ತೀರ್ಪನ್ನೇ ನಾವು ಪ್ರಶ್ನಿಸಿದ್ದೇವೆ. ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯ ವಿಚಾರ ತ್ರಿಸದಸ್ಯ ಪೀಠದ ಮುಂದಿದೆ. ಇದೆಲ್ಲವನ್ನೂ ಕಂಡೂ ಕಾಣದವರಂತೆ ವರ್ತಿಸಿದ್ದನ್ನು ನೋಡಿದರೆ ಈಗ ಹೊರಬಿದ್ದಿರುವ ನೀರು ನಿರ್ವಹಣಾ ಮಂಡಳಿ ರಚನೆಯ ವಿಚಾರವೇ ಮೊದಲಿನಿಂದಲೂ ಈ ಪ್ರಕರಣದ ಮುಖ್ಯ ವಿಷಯವಾಗಿತ್ತೇ ಎಂಬ ಅನುಮಾನ ಬರುವುದಿಲ್ಲವೇ ? ಇನ್ನು ಇದರಲ್ಲಿ ಕೇಂದ್ರ ಪಾತ್ರ, ಮಹದಾಯಿ ವಿಚಾರದಲ್ಲಾಗಲೀ, ಕಾವೇರಿ ವಿಚಾರದಲ್ಲಾಗಲೀ ಮಧ್ಯ ಪ್ರವೇಶ ನಿರಾಕರಿಸಿದ್ದ ಕೇಂದ್ರ, ನೀರು ನಿರ್ವಹಣಾ ಮಂಡಳಿ ರಚನೆ ನಾಲ್ಕೇ ದಿನದಲ್ಲಿ ಮುಗಿಸಲು ಒಮ್ಮೆಗೇ ಒಪ್ಪಿ ಬಿಟ್ಟದ್ದು ಹೇಗೆ ? ವರ್ಷದ ಹಿಂದೆ ತಮಿಳ್ನಾಡು ಮುಖ್ಯ ಮಂತ್ರಿಯವರು ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿದ್ದಾಗಲೇ ಇದಕ್ಕೆಲ್ಲಾ ಭೂಮಿಕೆ ಸಿದ್ದ ಪಡಿಸಲು ತೀರ್ಮಾನಿಸಲಾಗಿತ್ತೇ ? ಬರೀ ಪ್ರಶ್ನೆಗಳು ಮಾತ್ರ ಉಳಿಯುತ್ತವಲ್ಲವೇ ?

Thursday, 11 August 2016

ಇಪ್ಪತ್ತೈದು ವರುಷಗಳಿಂದ ನನ್ನನ್ನು ಸಹಿಸಿಕೊಂಡ ನನ್ನವಳ ಕುರಿತು ಮದುವೆಗೆ ಮುಂಚೆ ಬರೆದ ಕವನ......

Monday, 28 March 2016

ನವ ಮನ್ವಂಥರ



ಇದು ನಮ್ಮ ಅಂಗಡಿಯ ಎದುರಿಗಿರುವ ಮರದ ಮೂರು ಚಿತ್ರಗಳು. ಮೊದಲನೆಯದು ಈ ತಿಂಗಳ ೩ ರಂದು ತೆಗೆದಿದ್ದು. ಬೇಸಿಗೆ ಬಿಸಿಲಿಗೆ ಬಾಡಿ ಹೋದ ಎಲೆಗಳು. ಉರಿ ತಾಳಲಾರದೇ ಇನ್ನೇನು ಎಲೆಗಳೆಲ್ಲ ಉದುರುವ ಸ್ಥಿತಿಯಲ್ಲಿವೆ. ಎರಡನೆಯ ಚಿತ್ರ ೨೦ ನೇ ತಾರೀಖಿನದು, ಇರುವ ಎಲ್ಲ ಎಲೆಗಳಿಗೆ ನೀರು ಒದಗಿಸಲಾರದೇ ತನ್ನೆಲ್ಲ ಎಲೆಗಳನ್ನು ಉದುರಿಸಿಕೊಂಡು ನಿಂತ ಮರ. ನಂತರದ್ದು ನೋಡಿ ೨೪ ನೇ ತಾರೀಖು ತೆಗೆದದ್ದು. ನವ ಮನ್ವಂಥರದ ಚೈತ್ರನನ್ನು ಸ್ವಾಗತಿಸಲು ಸಜ್ಜಾಗಿ ಚಿಗುರಿ ನಿಂತ ಮರ.......

ಪ್ರಕೃತಿ ತನ್ನ ಇಂಥ ಕೆಲವು ಕೆಲಸಗಳಿಂದ ನಮಗೆ ಏನೇನೋ ಪಾಠಗಳನ್ನು ಹೇಳುತ್ತಿರುವಂತಿದೆ. ಆದರೆ, ದುರಹಂಕಾರಿ ಮನುಷ್ಯ ಏನನ್ನೂ ಕೇಳಿಸಿಕೊಳ್ಳಲಾರೆ ಎನ್ನುತ್ತಿದ್ದಾನೆ... ಭೂಮಿಯ ಶಾಖವನ್ನು ಕಡಿಮೆ ಮಾಡಲು ಮೀಟಿಂಗ್ ಮೇಲೆ ಮೀಟಿಂಗ್ ಮಾಡಿ ಹೈರಾಣಾಗುತ್ತಿದ್ದಾನೆ..

ತಾಗುವುದಕ್ಕೆ ಮುನ್ನ ಬಾಗುವುದು ಮೇಲು ಎನ್ನುತ್ತಾರೆ.... ಊಹ್ಞೂ... ನಾವು ಬಾಗುವುದೇ ಇಲ್ಲ ಸರ್ವನಾಶವಾಗುವವರೆಗೂ.....


Sunday, 28 February 2016

ಹೋಗಿ ಬನ್ನಿ.......




ಹೊರಟು ನಿಂತಿದ್ದಾಳೆ ಮಗಳು
ಮದುವೆಯಾಗಿ ಮದುಮಗನ ಜೊತೆ
ಕಣ್ಣಂಚಿನ ನೀರ ಹನಿ
ಹೊಮ್ಮಿಸಿದ್ದು ಎಂಥ ಭಾವ !

ಕೋಟೆ ಬಯಲಲ್ಲಿ ಹುಟ್ಟಿ
ಪುರದಮನೆಯ ಅಂಗಳದಲ್ಲಿ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಬೆಳೆದ ಬಂಗಾರಿ
ಎಷ್ಟು ಎತ್ತರವಾಗಿದ್ದಾಳೆ !
ನಿನ್ನೆಯಷ್ಟೇ ಪೃಥ್ವಿಯ ಸೊಂಟದಲ್ಲಿ ಕುಳಿತು
ಅಳುತ್ತಿದ್ದ ಕಂದ ಇವಳೇ ಏನು ?

ಅವಳ ಬಾಳಲ್ಲಿ ಈಗ
ಹೊಸ ಅರುಣ ಉದಯ

ಹೋಗಿ ಬನ್ನಿ
ನಿಮ್ಮ ಬಾಳು ಬಂಗಾರವಾಗಲಿ
ನಾಡು, ನುಡಿಯ ಗಡಿ ದಾಟಿಯೂ
ನಗು, ಸುಖ, ನೆಮ್ಮದಿ
ನಿಮ್ಮದಾಗಿರಲಿ....

Friday, 8 January 2016

ಹೊಸ ದೃಷ್ಟಿ.

ಪಾಕೀಸ್ತಾನದ ವಿಷಯದಲ್ಲಿ ಭಾರತ ತನ್ನ ಕಾರ್ಯತಂತ್ರವನ್ನು ಬದಲಾಯಿಸಿಕೊಳ್ಳಬೇಕಾಗಬಹುದು. ನವಾಜ್ ಷರೀಪರು ಭಾರತದ ಜೊತೆಗಿನ ಸಂಬಂಧದ ಸುಧಾರಣೆಯ ಪರವಾಗಿದ್ದಾರೆ ಎಂದು ನಾವು ನಂಬುವುದಾದರೆ, ನಾವು ಅದನ್ನು ಪರಿಗಣಿಸಬೇಕು ಮತ್ತು ಸೇನೆ ಹಾಗೂ ಐಎಸ್‌ಐ ಷರಫರಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ನಾವು ಅಂದುಕೊಂಡಿದ್ದರೆ, ಅವೆರಡನ್ನೂ ಕಡೆಗಣಿಸಿ ನಾವು ಷರೀಫರೊಂದಿಗೆ ಮಾತುಕತೆ ಮುಂದುವರೆಸಲು ಅನುವಾಗಬೇಕು. ಪಠಾಣ್ ಕೋಟ್ ಮೇಲಿನ ಧಾಳಿಯು ಮೋದಿ  ಪಾಕೀಸ್ತಾನಕ್ಕೆ ದಿಢೀರನೆ ಭೇಟಿ ನೀಡಿ, ಷರೀಫ್ ರ ಕೈ ಕುಲುಕಿ ಶಾಂತಿ ಮಾತುಕತೆ ಮುಂದುವರಿಕೆಗೆ ತೋರಿದ ಉತ್ಸಾಹಕ್ಕೆ ತಣ್ಣೀರೆರೆಚುವುದಕ್ಕೆ ಸೇನೆ ಹಾಗೂ ಐಎಸ್‌ಐ ಮಾಡಿದ ಕುತಂತ್ರ ಎನ್ನುವುದಾದರೆ, ನಾವು ಆ ಕುತಂತ್ರಕ್ಕೆ ಪ್ರತಿ ತಂತ್ರ ಹೂಡುವುದು ಒಳ್ಳೆಯದು. ಪಾಕೀಸ್ತಾನದೊಳಗೆ ಸೇನೆ ಮತ್ತು ಐಎಸ್‌ಐ ಗಳನ್ನು ಹದ್ದುಬಸ್ತಿನಲ್ಲಿಡುವುದು ಷರೀಫರಿಗೆ ಬಿಟ್ಟ ವಿಷಯ. ನಾವು ಅವರಿಗೆ ಪ್ರೋತ್ಸಾಹ ನೀಡಬೇಕು. ಭಾರತ ಮತ್ತು ಪಾಕ್ ಎರಡೂ ಕಡೆ ಉಭಯ ದೇಶಗಳ ಸಂಬಂಧವನ್ನು ಸುಮಧುರಗೊಳಿಸುವುದಕ್ಕೆ ಜನರ ಒಲವಿದೆ ತಾನೇ ? ಹಾಗಾದರೆ ನಾವಿನ್ನೂ ಹಳೆಯ ಕಗ್ಗಂಟುಗಳ ನಡುವೆ ಸಿಲುಕಿ ಅಲ್ಲಲ್ಲೇ ಒದ್ದಾಡುವುದನ್ನು ಬಿಡಬೇಕು. ಕಡೆಗೂ ವಿರೋಧ ಪಕ್ಷಗಳು (ವಿರೋಧಿಸುವುದಕ್ಕಾಗಿಯೇ ಇರುವ ಪಕ್ಷಗಳು) ಒಂದಷ್ಟು ಹುಯಿಲೆಬ್ಬಿಸಬಹುದು. ಆದರೂ, ಸಧ್ಯ ಭಾರತದಲ್ಲಿ ಮೋದಿಗಿರುವ ಜನಪ್ರಿಯತೆ ಮತ್ತು ಸಂಖ್ಯಾ ಬಲ ಅಂಥ ವಿರೋಧವನ್ನು ಮೆಟ್ಟಿ ನಿಲ್ಲುವ ಶಕ್ತಿ ಕೊಡುತ್ತದೆ. ಅಂತಿಮವಾಗಿ ಅದು ಸಕಾರಾತ್ಮಕ ಪರಿಣಾಮ ಬೀರಬಹುದು ಎಂದು ನಾವು ನಂಬಬೇಕು. ಎರಡೂ ಕಡೆ ಒಮ್ಮೆ ಸಂಬಂಧ ಸುಧಾರಣೆಯ ವಿರೋದಿಗಳನ್ನು, ಮತ್ತೊಮ್ಮೆ ಪರವಾಗಿರುವವರನ್ನು ಮಗದೊಮ್ಮೆ ಅಂತರರಾಷ್ಟ್ರಿಯ ಹಿತಾಸಕ್ತಿಗಳನ್ನು ಓಲೈಸುವ ನಾಟಕ ಆಡುತ್ತಾ ಕಾಲ ಕಳೆಯುವ ಬದಲು ಹೀಗೊಮ್ಮೆ ಪ್ರಯತ್ನಿಸುವುದು ಒಳ್ಳೆಯದಲ್ಲವೇ ?

Thursday, 8 October 2015

ಯಾವ ಸಂದೇಶ





ಮೋದಿ ಈಗ ಭಾರತದ ನಂ. ಒನ್ ಸೆಲೆಬ್ರಿಟಿ. ಒಂದು ರೀತಿಯಲ್ಲಿ ಭಾರತದ ಪ್ರಚಾರ ರಾಯಭಾರಿ. ಅವರು ಮಾಡಿದ್ದೆಲ್ಲ ಅದ್ಧೂರಿ ಹಾಗೂ ಸುದ್ದಿ. ಅವರನ್ನು ಅವರಷ್ಟೆ ಅಥವಾ ಅವರಿಗಿಂತ ಹೆಚ್ಚು ಸಮರ್ಥಿಸಿಕೊಳ್ಳಬಲ್ಲ ಒಂದು ದೊಡ್ಡ ಪಡೆಯೇ ದೇಶದಾದ್ಯಂತ ಇದೆ. ಅದು ವೃತ್ತಿ ಪರ ರಾಜಕೀಯ ವಲಯದಿಂದ ಹೊರತು ಪಡಿಸಿದ್ದು. ಅವರೀಗ ಅವರ ಸರ್ಕಾರದ ಏಕೈಕ ಶಕ್ತಿ ಕೇಂದ್ರ ಅಂದುಕೊಳ್ಳಲಾಗಿತ್ತು. ಆದರೆ ಈಗ ನೋಡಿ ಅವರು ದೇಶವಾಸಿಗಳಿಗೆ ರಾಷ್ಟ್ರಪತಿ ಪ್ರಣವಮುಖರ್ಜಿಯವರ (ಕೋಮು ಸೌಹಾರ್ದ ಕುರಿತಂತೆ) ಮಾತುಗಳನ್ನು ಪಾಲಿಸುವಂತೆ ಕರೆ ನೀಡುತ್ತಾರೆ. ಅವರು ಮುಂದುವರಿದು ಸಣ್ಣ ಪುಟ್ಟ ರಾಜಕಾರಣಿಗಳ ಬೇಜವಾಬ್ದಾರಿ ಮಾತುಗಳಿಗೆ ಕಿವಿಗೊಡಬೇಡಿ ಎನ್ನುತ್ತಾರೆ. ಅಂದರೆ, ಮೋದೀಜಿ ಈಗ ಅದೇ ಅವರ ಪಕ್ಷದ ಬೇಜವಾಬ್ದಾರಿ ಮಾತುಗಳನ್ನು ಆಡುವವರನ್ನು ಹದ್ದು ಬಸ್ತಿನಲ್ಲಿಡುವ  ಶಕ್ತಿ ಹೊಂದಿಲ್ಲ ಎಂದರ್ಥವೇ ? ಅಥವಾ ಅಂಥ ಮಾತುಗಳನ್ನಾಡಲು ಬೇರೆ ಕಡೆಯಿಂದ ಸೂಚನೆಗಳು ಸಿಗುತ್ತಿವೆಯೇ ? ಮತ್ತು ಅಂಥ ಮೂಲಗಳು ಮೋದೀಜೀಗಿಂತ ಬಲವುಳ್ಳವೇ ? ಅಥವಾ ಒಂದು ಕಡೆ ತಾನು ಕೋಮು ಸೌಹಾರ್ದಕ್ಕೆ ಬದ್ದ ಎಂದು ತೋರಿಕೊಳ್ಳುತ್ತಾ ಅಂಥ ದೇಶವಾಸಿಗಳ ಮನ ಗೆಲ್ಲುತ್ತಾ, ಇನ್ನೊಂದು ಕಡೆ ತಮ್ಮ ಪಡೆಗಳ ಮೂಲಕ ತಮ್ಮ ಪಕ್ಷದ ನಿಷ್ಠಾವಂತರ  ಭಾವನೆಗಳನ್ನು ಪೋಷಿಸಿಕೊಂಡು ಬರಲಾಗುತ್ತಿದೆಯೇ ?
    ಮೋದೀಜಿಯ ಇನ್ನೊಂದು ಮಾತು : ರಾಷ್ಟ್ರಪತಿಯವರ ಸಂದೇಶಕ್ಕಿಂತ ದೊಡ್ಡ ಸಂದೇಶ, ದೊಡ್ಡ ಮಾರ್ಗಸೂಚಿ, ದೊಡ್ಡ ದಿಕ್ಸೂಚಿ ಬೇರೊಂದಿಲ್ಲ. ಈ ದಿಕ್ಕಿನಲ್ಲಿಯೇ ನಡೆದರೆ ವಿಶ್ವದ ನಿರೀಕ್ಷೆಗಳನ್ನು ಭಾರತ ಈಡೇರಿಸಬಲ್ಲದು. ಅಂದರೆ ಮೋದಿಯವರ ಗಮನ ಸಂಪೂರ್ಣವಾಗಿ ವಿಶ್ವದ ನಿರೀಕ್ಷೆಗಳನ್ನು ಈಡೇರಿಸುವುದರಲ್ಲಿಯೇ ಹೊರತು ಭಾರತ ದೇಶವಾಸಿಗಳದ್ದನ್ನಲ್ಲ.

Wednesday, 2 September 2015

ಕೇರಳಾ.......

ಕಳೆದ ೧೫ ಮತ್ತು ೧೬ ರಂದು ಎರಡು ದಿನ ಕೊಡಗಿನ ಗಡಿಯ ಕೇರಳದಲ್ಲಿ ಸುತ್ತಾಡುವ ಅವಕಾಶವೊದಗಿ ಬಂದಿತ್ತು. ವೀರಾಜಪೇಟಿಯಿಂದ ಘಾಟಿ ಇಳಿದರೆ ಇರಿಟ್ಟಿ ಎಂಬ ಊರು. ಅಲ್ಲಿಂದ ಸುಮಾರು ಮೂವತ್ತು ಕಿ.ಮೀ. ದೂರದ ಕರುವಂಚಾಲು ಕಡೆಗೆ ನಮ್ಮ ಪಯಣ. ಅಲ್ಲಿ ತೋಟದ ಮಧ್ಯದ ಮನೆಯೊಂದರಲ್ಲಿ ಅವತ್ತು ಉಳಿದುಕೊಳ್ಳುವ ಅವಕಾಶ. ಕೇರಳ ದೇವರ ಸ್ವಂತ ನಾಡು ಎಂಬ ಹೆಸರಿದೆ- ಅಲ್ಲಿಯ ಸುಂದರ ಪ್ರಕೃತಿಯಿಂದ. ನಮಗೂ ಎರಡು ದಿನ ಅಲ್ಲಿಯ ಸುಂದರ ಪರಿಸರದ ದರ್ಶನವಾಯಿತು. ಅದರಲ್ಲೂ ಆ ತೋಟದ ಮನೆಯಲ್ಲಿ ಸಂಜೆ ಐದು ಗಂಟೆಯಿಂದ ಮರುದಿನ ಬೆಳಿಗ್ಗೆ ಒಂಬತ್ತು ಗಂಟೆಯವರೆಗೂ ಧೋ... ಎಂದು ಸುರಿವ ಮಳೆಯನ್ನು ನೋಡುತ್ತಾ, ಭೋರ್ಗರೆತವನ್ನು ಕೇಳುತ್ತಾ (ಒಂದು ಲೋಟ ಬಿಸಿ ಬಿಸಿ ಕಾಫಿಯೂ ಇಲ್ಲದೇ) ಕಳೆದದ್ದು ಮರೆಯಲಾಗದ ಅನುಭವ. ಅಲ್ಲಿ ನಾನು ತೆಗೆದ ಕೆಲವು ಚಿತ್ರಗಳು ಇಲ್ಲಿವೆ. ಇವು ನಾನು ಪಡೆದ ಅನುಭವದ ಲವಲೇಷವನ್ನೂ ನಿಮಗೆ ತಲುಪಿಸಲಾರವು ಎಂದು ನನಗೆ ಗೊತ್ತಿದೆ. ಆದರೂ,  ಇದು ನನಗಾದ ಅಪೂರ್ವ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾತ್ರ. ಅಲ್ಲೆಲ್ಲ ಓಡಾಡುತ್ತ, ನನಗೆ ಮತ್ತೆ ಮತ್ತೆ ನೆನಪಾದದ್ದು ಮೈಸೂರಿನ ಕವಿ ಕೆ. ನ. ಶಿವತೀರ್ಥನ್ ಅವರ ಈ ಸಾಲುಗಳು

ಕೇರಳಾ ಕೇರಳಾ

ಏನಲ್ಲಿ ಹೇರಳಾ

ನಾರೀ ಕೇಳಾ


























.......

Friday, 17 July 2015

ಅಮ್ಮನ ನೆನಪು


ಮೈಸೂರಲ್ಲಿ ಬಸ್ಸು ಹತ್ತಿ ಕುಳಿತಿದ್ದೇನೆ ಮೂಡಬಿದರೆಯ ಕಡೆಗೆ. ಪಕ್ಕದಲ್ಲಿದ್ದ ಮಡದಿಯ ಜೊತೆ ಮಾತಾಡುತ್ತ ನೆನಪುಗಳು ಸುರುಳಿ ಬಿಚ್ಚಿಕೊಳ್ಳುತ್ತವೆ. ನಾವು ಹಿಂದಿನ ಬಾರಿ ಮೂಡಬಿದರೆಯ ತಮ್ಮನ ಮನೆಗೆ ಹೋಗಿದ್ದು ಅವನ ಮಗನ ಉಪನಯನದ ಸಂದರ್ಭದಲ್ಲಿ-ಸುಮಾರು ಎರಡೂವರೆ ವರ್ಷಗಳ ಕೆಳಗೆ. ಆಗ ನನ್ನ ಅಪ್ಪ-ಅಮ್ಮ ಇಬ್ಬರೂ ಬದುಕಿದ್ದರು. ನಾವು ಉಪನಯನದ ಎರಡು ದಿನ ಮೊದಲೇ ಅಲ್ಲಿಗೆ ಹೋದೆವು. ಅಲ್ಲಿಗೆ ಬರುವವರಿದ್ದ ಅಪ್ಪ-ಅಮ್ಮ ಅವರೊಟ್ಟಿಗೆ, ನಾನು ನನ್ನ ಮಗ ಹೆಂಡತಿಯ ಜೊತೆ ಎರಡು ದಿನ ಕಾಲ ಕಳೆಯುವ ಆಸೆ ನನ್ನದು. ಮುಂದೆ ಎಂಥ ದಿನಗಳು ಬರುತ್ತವೋ ಏನೋ ಎಂದುಕೊಂಡೇ ಆ ಯೋಚನೆ ಮಾಡಿದ್ದೆ. ಇರುವ ದಿನಗಳನ್ನು ಚೆನ್ನಾಗಿ ಅನುಭವಿಸಿಬಿಡಬೇಕು ಎನ್ನುವವ ನಾನು. ಬದುಕು ಕ್ಷಣಿಕ ಎಂದು ಶಂಕರಾಚಾರ್ಯರು ಹೇಳಿದರೂ ಅಷ್ಟೆ, ಅಲ್ಬರ್ಟ್ ಕಮು ಹೇಳಿದರೂ ಅಷ್ಟೆ. ಆದರೆ ಶಂಕರಾಚಾರ್ಯರು ಈ ಬದುಕು ಕ್ಷಣಿಕ, ಇದನ್ನು ನೆಚ್ಚಿಕೊಳ್ಳಬೇಡ ಎಂದರೆ, ಆಲ್ಬರ್ಟ್ ಕಮು ಇದು ಕ್ಷಣಿಕ ಆದುದರಿಂದ ಇದನ್ನು ಅರ್ಥಪೂರ್ಣವಾಗಿ ಬದುಕು ಎನ್ನುತ್ತಾನೆ. ಲಂಕೇಶ್ ಇದನ್ನು ತಮ್ಮ ಲೇಖನಗಳಲ್ಲಿ ಹೆಚ್ಚು ಅರ್ಥವತ್ತಾಗಿ ವಿವರಿಸುತ್ತಿದ್ದರು. ನಾನು ಅವರಿಂದ ಕಲಿತೆ... ಇರಲಿ. ಮಾತು ಎತ್ತೆತ್ತಲೋ ಹೋಗುತ್ತಿದೆ. 
ಅಮ್ಮನಿಗೆ ಸಂಬಂಧ ಪಟ್ಟ ಒಂದು ಘಟನೆ ನೆನಪಾಗುತ್ತಿದೆ. ಅಮ್ಮ ಕೆಲವು ಉಡುಗೊರೆಗಳನ್ನು ತಂದಿದ್ದಳು. ನನಗೆ ತೋರಿಸಿದಳು. "ಇದು ಸುರೇಶನಿಗೆ, ಇದು ಮಲ್ಲಿಕನಿಗೆ, ಇದು ಸುದರ್ಶನನಿಗೆ... " ಎಂದು ಇನ್ನೊಂದನ್ನು ತೋರಿಸಿ " ಇದನ್ನು ಚಿನ್ನಿಗೆ ಎಂದು ಇಟ್ಟಿದ್ದೇನೆ. ಈಗಲೇ ಕೊಟ್ಟು ಬಿಡುತ್ತೇನೆ. ಅವಳ ಮದುವೆಯ ಹೊತ್ತಿಗೆ ನಾನು ಇರುತ್ತೇನೋ ಇಲ್ಲವೋ " ಎಂದಳು. ನನಗೆ ಪಿತ್ತ ನೆತ್ತಿಗೇರಿತು. " ಅದೆಲ್ಲ ಯಾಕೀಗ ? ಕೊಡಬೇಕು ತಾನೇ. ಕೊಟ್ಟು ಬಿಡು " ಎಂದೆ. ನಾನು ಅವಳು ಜಗಳಾಡುವ ಶೈಲಿಯಲ್ಲಿ ಮಾತಾಡಿದ್ದೇ ಹೆಚ್ಚು. ಕೊಟ್ಟೂ ಬಿಟ್ಟಳು. ಅವಳ ಅನುಮಾನದ ಹಾಗೇ ಹೇಳದೇ ಕೇಳದೇ ಹೊರಟೂ ಹೋದಳು.......

Wednesday, 25 March 2015

ರವೀ,
ಜಗತ್ತಿನ ಗಾಡಾಂಧಕಾರದೆದರು ಒಂದು ಹಣೆತಯನ್ನು ನಮ್ಮ ಮನೆ ಹೊಸಿಲ ಮೇಲೆ ಹಚ್ಚಿಟ್ಟು ಕತ್ತಲನ್ನು ದೂರಾಗಿಸುವ ಪ್ರಯತ್ನ ಮಾಡೋಣ. ಹಾಗೇ ಅಕ್ಕಪಕ್ಕದವರೂ ಅಂತಹ ಕೆಲಸ ಮಾಡುವಂತೆ ಪ್ರೇರೇಪಿಸೋಣ. ಆದರೆ ಜಗತ್ತಿನ ಎಲ್ಲ ಕತ್ತಲನ್ನು ಹೊಡೆದೋಡಿಸುತ್ತೇನೆ ಎಂದುಕೊಂಡು ನಮ್ಮ ಮನೆಗೇ ಬೆಂಕಿ ಹಚ್ಚಿಕೊಳ್ಳುವ ಹುಚ್ಚು ಸಾಹಸ ಬೇಡ.

Wednesday, 9 April 2014

ಮತ

ಮುಂದಿನ ವಾರ ಕರ್ನಾಟಕದಲ್ಲಿ ಲೋಕ ಸಭೆಗೆ ಚುನಾವಣೆ. ನಾವು ಅಂದರೆ ಮತದಾರರು ಪ್ರತಿಯೊಬ್ಬರೂ ತಪ್ಪದೇ ಮತಚಲಾಯಿಸಬೇಕು. ಅದು ನಮ್ಮ ಹಕ್ಕು. ಮತಚಲಾಯಿಸಲು ಯಾವುದೇ ಕಾರಣಕ್ಕೂ ತಪ್ಪಬಾರದು. ಸರಿಯಾದ ಅರ್ಹ ಅಭ್ಯರ್ಥಿಗೆ ಮತ ಹಾಕಬೇಕು. ಮತ ಚಲಾಯಿಸುವಾಗ ಜಾತಿ, ಧರ್ಮ, ಹಣ, ಹೆಂಡ ಮುಂತಾದ  ಆಮಿಷಗಳಿಗೆ ಬಲಿ ಬೀಳಬಾರದು. ಯಾಕೆಂದರೆ ಪ್ರಜಾಪ್ರಭುತ್ವ ಬಲಪಡಿಸಬೇಕು.
ಇದು ಎಲ್ಲಾ ರಾಜಕೀಯ ಮುಖಂಡರು, ಪಕ್ಷಗಳು ನಮಗೆ ನೀಡುವ ಪುಕ್ಕಟೆ ಸಲಹೆ.
ಮತ ಕೊಟ್ಟು ಅವರಲ್ಲಿ ಒಬ್ಬರನ್ನು ಚುನಾಯಿಸಿದ ಮೇಲೆ ನಮ್ಮ ಜವಾಬ್ದಾರಿ ಮುಗಿಯಿತು. ಆಮೇಲೆ ಅವರು ಆಡುವ ಆಟಗಳನ್ನು ನಾವು ಸುಮ್ಮನೆ ನೋಡುತ್ತಾ ಕುಳಿತುಕೊಳ್ಳಬೇಕು.
ಅದೇ ರಾಜಕೀಯ ಪಕ್ಷಗಳು ನಾವು ಸರಿಯಾದ ಅಭ್ಯರ್ಥಿಯನ್ನೆ ಚುನಾವಣೆಗೆ ನಿಲ್ಲಿಸುತ್ತೇವೆ. ಯಾವುದೇ ಆಮಿಷಗಳನ್ನು ಒಡ್ಡುವುದಿಲ್ಲ. ಜಾತಿಯನ್ನು ನೋಡಿ ಮತ ಹಾಕಿ ಎಂದು ಹೇಳುವುದಿಲ್ಲ. ಗೆದ್ದ ಮೇಲೆ ಪಕ್ಷಾಂತರ ಮಾಡುವುದಿಲ್ಲ. ಪಕ್ಷಾಂತರಿಗಳನ್ನು ಸೇರಿಸಿಕೊಳ್ಳುವುದಿಲ್ಲ ಎಂದು ನಮಗೆ ಖಾತ್ರಿ ಕೊಡುವುದಿಲ್ಲ. ಏಕೆಂದರೆ ಅದನ್ನೆಲ್ಲಾ ಅವುಗಳು ಮಾಡಲಾಗುವುದಿಲ್ಲ.
ಇದು ಪ್ರಜಾ ಪ್ರಭುತ್ವ. ನಾವು ಪ್ರಭುಗಳು. ಇದನ್ನು ನಾವು ನಂಬಬೇಕು.

Friday, 28 February 2014

ಡಾಂಭಿಕತೆ

'ನನ್ನ ತಾಯಿ ನಿನ್ನೆ ಸತ್ತು ಹೋದಳು. ಇಲ್ಲ ನಿನ್ನೆ ಅಲ್ಲ ಮೊನ್ನೆ ಇರಬೇಕು' ಹೀಗೆ ಶುರುವಾಗುತ್ತದೆ ಅಸಂಗತವಾದದ ಜನಕ ಅಲ್ಬರ್ಟ್ ಕಾಮುವಿನ ಕಾದಂಬರಿ ದಿ ಔಟ್ ಸೈಡರ್‍, ಎಂದು ಟಿ. ಪಿ. ಅಶೋಕರ 'ನವ್ಯ ಕಾವ್ಯದ ಪ್ರೇರಣೆಗಳು' ಎಂಬ ಪುಸ್ತಕದಲ್ಲಿ ಓದಿದ ನೆನಪು. ಈ ಸಮಾಜದ ಡಾಂಭಿಕತೆಯನ್ನು ವಿಡಂಬಿಸುವ ಕಾದಂಬರಿ ಅದು. ನಾವು ನಮ್ಮ ನಿಜವಾದ ಭಾವನೆಗಳನ್ನು ಅದುಮಿ ಸುಳ್ಳು ಸುಳ್ಳೇ ನಟಿಸುತ್ತ ಬದುಕುತ್ತಿರುತ್ತೇವೆ. ಆದರೆ ಇಷ್ಟು ಬರಡಾಗಿ ಬದುಕುವುದು ಸಾದ್ಯವಿಲ್ಲದಿದ್ದರೂ, ಸಹಜವಾಗಿ ಬದುಕುವುದೂ ಕಷ್ಟವಾಗಿದೆ. ಬೆತ್ತಲಾಗುವುದಿರಲಿ ಅರೆಬೆತ್ತಲಾದರೂ ಸುತ್ತ ಮುಖವಾಡ ಧರಿಸಿದವರು ನಮ್ಮ ಪಾಡಿಗೆ ಇರಲು ಬಿಡಲಾರರು. ಜಗವೇ ನಾಟಕ ರಂಗ ಎಂಬುದು ಈ ಅರ್ಥದಲ್ಲಿ ಸರಿ ಎನಿಸುತ್ತದೆ.. ಬರಬರುತ್ತ  ನಿಜ ಮುಖ ಯಾವುದು, ಮುಖವಾಡ ಯಾವುದು ಎಂಬುದೇ ತಿಳಿಯದಂತಾಗಿದೆ.......

Saturday, 25 January 2014

ನಗರಗಳತ್ತ ಮುಖ

ಎಲ್ಲ ರಸ್ತೆಗಳೂ ನಗರಗಳತ್ತ ಮುಖ ಮಾಡಿವೆ. ಸಮವಸ್ತ್ರ ತೊಟ್ಟ ಮಕ್ಕಳನ್ನು ಹೊತ್ತ ವಾಹನಗಳು ಮಣ್ಣು ರಸ್ತೆಯಿಂದ ಜಲ್ಲಿ ರಸ್ತೆಗೆ ನಂತರ ಟಾರು ರಸ್ತೆಗೆ ತಲುಪಿ ಕಾನ್ವೆಂಟ್ ಗಳತ್ತ ಹೋಗುತ್ತಿವೆ. ಟಿಫನ್ ಕ್ಯಾರಿಯರ್‍ ತುಂಬಿಕೊಂಡ ಬ್ಯಾಗ್ ಹೊತ್ತ ಜನ ಕೆಲಸಕ್ಕೆ ನಗರಕ್ಕೆ ಹೋಗುವ ಬಸ್ ಹತ್ತುತ್ತಿದ್ದಾರೆ. ನಗರವನ್ನು ಸಂಪರ್ಕಿಸುವ ರಸ್ತೆ ಹಳ್ಳಿಗಳತ್ತಲೂ ಹೋಗುತ್ತದೆ ಎನ್ನುತ್ತಾರೆ. ಇದು ಹಾಗಲ್ಲ. ಬೆಟ್ಟದಲ್ಲಿ ಹುಟ್ಟಿದ ನದಿ ಸಮುದ್ರದ ಕಡೆ ಹೋಗುವ ಹಾಗೆ ಅನ್ನಿಸುತ್ತಿಲ್ಲವೇ ? ಮೊಳಕೆಯೊಡೆದ ಚಿಗುರು ಬೆಳಕಿನೆಡೆ ಮುಖ ಎತ್ತಿ ಮೇಲು ಮೇಲಕ್ಕೆ ಬೆಳೆಯುತ್ತ ಗಗನದೆಡೆ ಕತ್ತು ಚಾಚಿದ ಹಾಗೆಯೇ ? ಅಂಥ ಚಿಗುರಿಗೆ ಬೇರಿನ ಮೂಲಕ ನೆಲದ ನಂಟು ಬೇಕೇ ಬೇಕು. ಆದರೆ ನಗರಕ್ಕೆ ಹೊರಟ ಮನುಷ್ಯನಿಗೆ............... ಒಂದೆಡೆ ಈ ವಲಸೆಯನ್ನು ತಡೆದು ಭುವಿಯ, ಬದುಕಿನ ಸ್ವಾಸ್ಥ್ಯವನ್ನು ಕಾಪಾಡಬಹುದಾದ ವ್ಯವಸ್ಥೆಗೆ ಅದರಲ್ಲಿ ಆಸಕ್ತಿ, ಪುರುಸೊತ್ತಿಲ್ಲ. ಇನ್ನು ಇದರಿಂದ ಲಾಭ ಪಡೆಯುವ ಹಿತಾಸಕ್ತಿಗಳು ತಮ್ಮೆಲ್ಲ ಶ್ರಮ ವಹಿಸಿ ದುಡಿಯುತ್ತಿವೆ. ಅಥವಾ ಅಂಥ ಹಿತಾಸಕ್ತಿಗಳ ಕೈಯಲ್ಲೇ ವ್ಯವಸ್ಥೆ ಇದೆಯೇ ?......

Thursday, 23 January 2014

ಭೀಮೇಶ್ವರ (ಸಕಲೇಶಪುರ)


ಇಲ್ಲಿ ಹರಿಯುತ್ತಿರುವುದು ಎತ್ತಿನ ಹಳ್ಳ. ಮುಂದೆ ಇದೇ ಕೆಂಪು ಹೊಳೆ, ನಂತರ ನೇತ್ರಾವತಿ. ಮೇಲೆ ಹೋಗುತ್ತಿದೆ ನೋಡಿ ಗೂಡ್ಸ್ ರೈಲು, ಅದು ಇಲ್ಲಿಂದ ಮುಂದೆ ಸಾಗಿ ದೋಣಿಗಲ್ಲು, ಮಾರನಹಳ್ಳಿ, ಎಡಕುಮರಿ ಮುಖಾಂತರ ಸುಬ್ರಹ್ಮಣ್ಯ ತಲುಪುತ್ತದೆ. ಈ ರೈಲು ದಾರಿಯಲ್ಲಿ ೫೦-೫೫ ಸುರಂಗಗಳು ಅಷ್ಟೇ ಸೇತುವೆಗಳು ಸಿಗುತ್ತವೆ. ಅತಿ ಹೆಚ್ಚು ಅಂದರೆ ಒಂಬೈನೂರು ಮೀಟರ್‍ ಉದ್ದದ ಸುರಂಗವೊಂದಿದೆ. ಮಧ್ಯ ಸುರಂಗದಲ್ಲಿ ಇದ್ದರೆ ಹಿಂದೆಯೂ, ಮುಂದೆಯೂ ಬೆಳಕು ಗೋಚರಿಸುವುದೇ ಇಲ್ಲ. ನೂರಕ್ಕೆ ನೂರು ಕತ್ತಲಾಗಿರುತ್ತದೆ. ಕಣ್ಣುಗಳು ವ್ಯರ್ಥ ಎನ್ನಿಸುವಂತಹ ಅನುಭವ.
    ಇಲ್ಲ ಬಿಡಿ, ನೀವು ಇಲ್ಲಿ ನನ್ನ ಹಾಗೆ ಭೀಮೇಶ್ವರನ ಸನ್ನಿಧಿಯಲ್ಲಿ (ಭೀಮ ಪೂಜಿಸಿದ್ದರಿಂದ ಶಿವನಿಗೆ ಆ ಹೆಸರು)  ನಿಂತು ಈ ದೃಶ್ಯವನ್ನು ನೋಡುವಂತಿಲ್ಲ. ಯಾಕೆ ?
    " ಯಾಕೆಂದರೆ, ಇದು ನಮ್ಮ ಸ್ವಂತ ಪ್ರೈವೇಟ್ ಜಾಗ. ನಮಗೆ ಯಾಕೆ ರಿಸ್ಕು ಸುಮ್ಮನೆ. ನಾವು ಗೌರ್‍ಮೆಂಟಿಂದ ಯಾವುದೇ ಸಹಾಯ ತಗೊಂಡಿಲ್ಲ.'' ಎನ್ನುತ್ತಾರೆ ಆ ಎಸ್ಟೇಟಿನ ಒಡೆಯ ವಿಜಿ. ಪಾಪ ಅವರು ಸಕಲೇಶಪುರದ ನಿರಂಜನ ಅವರ ಕೋರಿಕೆಯ ಮೇರೆಗೆ ನಮಗೆ ಅಲ್ಲಿಗೆ ಹೋಗಲು ಅನುವು ಮಾಡಿಕೊಟ್ಟರು.
    ಏನಪ್ಪಾ ಹಳ್ಳದ ತೀರದಲ್ಲಿರುವ ದೇವರನ್ನು ನೋಡುವುದಕ್ಕೂ ಇವರದೇನಪ್ಪಾ ತಕರಾರು ಎಂದು ನೀವಂದುಕೊಳ್ಳಬಹುದು ಇಲ್ಲ ಇವರು ಮೊದಲಿಂದ ಹೀಗೆ ರಫ್ ಆಗಿದ್ದವರಲ್ಲ. ಜನ ಸಹಜವಾಗಿ ಬಂದು ನೀರಲ್ಲಿ ಕೈಕಾಲು ತೊಳೆದೋ, ಸ್ನಾನ ಮಾಡಿಯೋ ದೇವರ ದರ್ಶನ ಮಾಡಿ ಹೋಗುತ್ತಿದ್ದರು. ಬರ ಬರುತ್ತಾ ಪ್ರವಾಸೋದ್ಯಮ, ನಾಗರೀಕತೆ ಬೆಳೆದಂತೆ (ಇದು ವಿಪರ್‍ಯಾಸ) ಬೇರೆಯದೇ ತರದ ಜನ ಬರತೊಡಗಿದರು. ಆಗ ಇವರಿಗೆ ಸ್ವಲ್ಪ ಕಿರಿಕಿರಿಯಾದರೂ ಸಹಿಸಿಕೊಂಡು ಬರತೊಡಗಿದರು. ಯಾಕೆಂದರೆ ಪ್ರಕೃತಿ ಸಹಜವಾದ ಸೌಂದರ್ಯವನ್ನು, ದೇವರನ್ನು ನೋಡಲು ತಡೆಯುವುದು ಸರಿಯಲ್ಲ ಎಂದು.
    ಆಮೇಲಾಮೇಲೆ ಎಲ್ಲ ಅತಿಯಾಗತೊಡಗಿತು. " ಡ್ರಿಂಕ್ಸ್ ತಗೊಳ್ಳೋದು, ನಾನ್,  ವೆಜ್ ಮತ್ತೆ ಹುಡ್ಗೀರು, ಡ್ಯಾನ್ಸು. ಇಲ್ಲೆಲ್ಲ ಎಷ್ಟು ಗಲೀಜು ಮಾಡ್ತಾರೆ ಅಂದ್ರೆ ನಮಗೆ ಅದನ್ನು ಕ್ಲೀನ್ ಮಾಡ್ಲಿಕ್ಕೆ ಒಂದು ದಿನ ಸಾಕಾಗುವುದಿಲ್ಲ. ಮತ್ತೆ ನಮ್ಮ ಕೆಲಸದವರೂ ಅಷ್ಟೇ ಬೇರೆಯವರು ತಿಂದ ಗಲೀಜನ್ನೆಲ್ಲಾ ಕ್ಲೀನು ಮಾಡ್ಲಿಕ್ಕೆ ಒಪ್ಪಲ್ಲ. ಎಂತೆಂಥದೋ ರಿಸ್ಕು"  ಇವರು ಕಾನೂನಿನ ತೊಡಕಿನಲ್ಲಿ ಸಿಲುಕಿಕೊಂಡದ್ದೂ ಉಂಟಂತೆ ಪಾಪ.
    "ಇದರ ಸಾವಾಸವೇ ಬೇಡ ಅಂತೇಳಿ ಕಾಂಪೌಂಡ್ ಮಾಡ್ಸಿ ಗೇಟಿಗೆ ಬೀಗ ಹಾಕಿದ್ದೇವೆ." ಅಂದು ನಿರಾಳರಾದರು. ಅಲ್ಲಿ ಆಗಾಗ ಸಾಂಪ್ರದಾಯಿಕ ಭಕ್ತರ ಮದುವೆಂತಹ ಸಮಾರಂಭಗಳು ಸರಳವಾಗಿ ಈಗಲೂ ನಡೆಯುತ್ತವೆ. ದೇವಸ್ಥಾನಕ್ಕೆ ಗರ್ಭ ಗುಡಿಯಿಲ್ಲ. ಮೇಲ್ಚಾವಣಿಯ ದೇವಸ್ಥಾನ. ಗೋಡೆಗಳಿಲ್ಲ. ತುಂಬ ಪ್ರಶಾಂತವಾದ ವಾತಾವರಣ. ಸುತ್ತ ಕಾಫಿ ತೋಟ.


ನಾನು ತಿರುಪತಿಗೆ ಹೋಗಿದ್ದಾಗಲೂ ಹುಂಡಿಗೆ ಕಾಣಿಕೆ ಹಾಕಿದವನಲ್ಲ. ತಿಮ್ಮಪ್ಪನಂಥ ದೇವರಿಗೆ ನಾನು ಕೊಡಲು ಶಕ್ತನೇ. ನನ್ನ ಸಾಲವನ್ನು ಮನಸ್ಸು ಮಾಡಿದರೆ ತಿಮ್ಮಪ್ಪ ತೀರಿಸಬಹುದೇ ಹೊರತು, ತಿಮ್ಮಪ್ಪನ ಸಾಲವನ್ನು ತೀರಿಸಲು ನಾನು ಸಹಾಯ ಮಾಡುತ್ತೇನೆನ್ನುವುದು ಅಹಂಕಾರವಾದೀತು. ಆದರೆ ಇಲ್ಲಿನ ವಾತಾವರಣ ನೋಡಿ ಮನಸ್ಸು ಪ್ರಫುಲ್ಲವಾಯಿತು. ತಣ್ಣಗೆ ಕೂತು ಧ್ಯಾನ ಮಾಡಲು ಹೇಳಿ ಮಾಡಿಸಿದ ವಾತಾವರಣ. ನೀರು ಹರಿಯುವ ಶಬ್ದ. ತೋಟದಲ್ಲಿ ಹಕ್ಕಿಗಳ ಚಿಲಿಪಿಲಿ -ಅರ್ಥವಾಗದ ಆದರೆ ಅನಿರ್ವಚನೀಯ ಅನುಭವ ನೀಡುವ - ಮಾತುಕತೆ. ಹುಂಡಿಯಲ್ಲಿ ಒಂದು ನೋಟು ತುರುಕಿ, ನಮಸ್ಕರಿಸಿದೆ. ದೇವರಿಗಲ್ಲ ಅಲ್ಲಿನ ಪರಿಸರಕ್ಕೆ.
 


ವಾಪಾಸು ಮೇಲೆ ಹತ್ತಿ ಬರುವಾಗ ನಮಗೆ ಬಾಯಾರಿಕೆ ಆಗುತ್ತಿತ್ತು. ಆದರೆ ಅವರು ಸ್ಮೂತ್ ಆಗಿದ್ದರು. " ನೋಡಿ ಇವರೇ, ನಿಮ್ಮಂತವರು ಬಂದರೆ ಪರವಾಗಿಲ್ಲ. ಒಮ್ಮೆ ನೋಡಿ ಐದಾರು ಜನ ಬಂದ್ರು. ಹೀಗೆ ಯಾರೋ ಪರಿಚಯದ ರೆಸಾರ್ಟ್‌ನವರು ಕಳುಹಿಸಿದ್ದರು. ಒಂದರ್ಧ ಗಂಟೆ ಇದ್ದು ಹೋಗ್ತೇವೆ ಅಂದ್ರು. ಮಧ್ಯಾಹ್ನ ಹನ್ನೆರಡಕ್ಕೆ ಬಂದವರು ಸಂಜೆ ಐದಾದರೂ ಹೊರಡುವ ಸೂಚನೆಯೇ ಇಲ್ಲ. ಹೋಗಿ ಕೇಳಿದ್ರೆ " ರೀ ನಾವು ಹಣ ಕೊಟ್ಟು ಬುಕ್ ಮಾಡಿ ಬಂದಿದ್ದೇವೆ. ನೀವ್ಯಾರ್‍ರೀ ಕೇಳೊಕೆ ಅಂತ ನಮಗೇ ದಬಾಯಿಸಿದ್ರು." ......  ಅವರವರ ಕಷ್ಟ ಅವರವರಿಗೆ. ನಾವು ಯಾರದೋ ಜಾಗದಲ್ಲಿದ್ದೇವೆ ಅಂದುಕೊಂಡು ಮನಸೋಇಚ್ಛೆ ವರ್ತಿಸಬಾರದೆನ್ನುವ ಪ್ರಜ್ಞೆ ನಮಗೂ ಇರಬೇಕು. ನಾವು ನೋಟಕ್ಕೆ ಮಾತ್ರ ನಾಗರೀಕರು. ನಡವಳಿಕೆಯಲ್ಲೂ ಅದನ್ನು ಅನುಸರಿಸಬೇಕಲ್ಲವೇ ? ಅವರಿಗೆ ವಂದನೆಗಳನ್ನು ಹೇಳಿ ಹೊರಟೆವು.