Wednesday, 24 July 2013

(ಅಮ್ಮ ಹೊರಟು ಹೋಗಿ ಎರಡು ತಿಂಗಳು...... [ ಜ್ಯೇಷ್ಠ ಶುದ್ಧ ಚತುರ್ದಶಿ. ಜೂನ್ 22] )
ಏಪ್ರಿಲ್ ನ ರವರವ ಬಿಸಿಲು ಅಮ್ಮನ ಬಲಗಾಲಿನ ಮೇಲೆ ಬೀಳುತ್ತಿತ್ತು. ಸಾಲದ್ದಕ್ಕೆ ನನ್ನ ಕೈಲಿದ್ದ ಮಡಕೆಯಲ್ಲಿನ ಬೆಂಕಿಯ ಶಾಖ ಬೇರೆ. ಕಾಲುಗಳನ್ನು ಮಡಚಿ ನೆರಳಿಗಿಡುವ ಅನಿಸುತ್ತಿತ್ತು. ಆದರೆ ದೇಹವನ್ನು ಚಟ್ಟಕ್ಕೆ ಹಗ್ಗದಿಂದ ಬಿಗಿಯಲಾಗಿತ್ತು. ಈ ಕಾಲುಗಳನ್ನು ನಾನು ಸಣ್ಣಲ್ಲಿಂದ ನೋಡಿಕೊಂಡು ಬಂದಿದ್ದೇನೆ. ಹಾಗೆಂದು ನಾನು ಆಗಾಗ್ಗೆ ಅಮ್ಮನ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವ ಅಭ್ಯಾಸದವನಲ್ಲ. (ಒಂದು ವಾರದ ಮೊದಲು ಯುಗಾದಿಗೆ ಊರಿಗೆ ಹೋಗಿ ಹೊರಡುವ ಮೊದಲು ಅಮ್ಮನ ಹತ್ತಿರ ಹೋಗಿ ಬರುತ್ತೇನೆ ಎಂದು ಹೇಳಲೂ ಸಾಧ್ಯವಾಗಿರಲಿಲ್ಲ. ನಾನು ಹೊರಡುವ ಸಮಯದಲ್ಲಿ ಅವಳು ಮಲಗಿದ್ದಳು. ಅವಳನ್ನು ಎಬ್ಬಿಸುವ ಮನಸ್ಸಾಗದೇ ಹಾಗೇ ಬಂದಿದ್ದೆ. ಕಡೆಗೂ ಅವಳು ನನಗೆ ಹೇಳದೇ ಹೋಗಿಬಿಟ್ಟಳು) ಅಥವಾ ಅಮ್ಮ ತನ್ನ ಕಾಲುಗಳಿಂದ ನನ್ನ ಒದ್ದೂ ಇಲ್ಲ. ನಾನು ಚಿಕ್ಕವನಿದ್ದಾಗ ಅಮ್ಮನ ಸೀರೆಯ ನೆರಿಗೆಯನ್ನು ಕಾಲ ಬುಡದಲ್ಲಿ ಕುಳಿತು ಸರಿಪಡಿಸಿದ ನೆನಪು; ಅಮ್ಮನ ಕಾಲುಂಗುರವನ್ನು ಹಾಕುವುದಕ್ಕೋ, ತೆಗೆಯುವುದಕ್ಕೋ, ಸರಿಪಡಿಸುವುದಕ್ಕೋ, ಅಥವಾ ಸುಮ್ಮನೆ ಹಾಗೇ ಕಾಲುಂಗುರವನ್ನು ಆಡಿಸಿದ ನೆನಪು ; ಅವಳಿಗೆ ಬೆನ್ನು ನೋವು ಅತಿಯಾದಾಗ ಅವಳ ಬೆನ್ನ ಮೇಲೆ ನನ್ನ ಕಾಲುಗಳಿಂದ ತುಳಿದ ನೆನಪು; ಕಾಲು ನೀಡಿ ಕೂತು ಹೂ ಕಟ್ಟುತ್ತಲೋ, ಓದುತ್ತಲೋ, ಬತ್ತಿ ಹೊಸೆಯುತ್ತಲೋ ಇದ್ದಾಗ ಆ ಕಾಲುಗಳನ್ನು ನೋಡಿದ ನೆನಪು. ನನ್ನನ್ನು ಊಟಕ್ಕೆ ಕೂರಿಸಿ ತಾನು ಬಡಿಸುತ್ತಾ, ನನ್ನ ಪಕ್ಕ ನಿಂತಾಗ ಆಕೆಯ ಕಾಲುಗಳನ್ನು ನೋಡಿದ ನೆನಪು; ತೀರಾ ಇತ್ತೀಚೆಗೆ ಕಳೆದ ವರ್ಷ ಯಡಿಯೂರಪ್ಪನವರ ರಾಜೀನಾಮೆ ಷೋ ನಡೆಯುತ್ತಿದ್ದಾಗ ತಿ. ನರಸೀಪುರದ ನಮ್ಮ ಮನೆಯ ಕುರ್ಚಿಯ ಮೇಲೆ ಕುಳಿತು, ಸೋಫಾದ ಮೇಲೆ ಕಾಲು ನೀಡಿ ಟಿ.ವಿ. ನೋಡುತ್ತಾ ( ಹಾಗೆ ಆರಾಮಾಗಿ ಕುಳಿತುಕೋ ಎಂದು ನಾನೇ ಆಕೆಗೆ ಹೇಳಿದ್ದೆ ; ಆದರೂ ನಾನು ಹೋದ ತಕ್ಷಣ ಆಕೆ ಕಾಲುಗಳನ್ನು ಕೆಳಗಿಳಿಸುತ್ತಿದ್ದಳು ) ಬತ್ತಿ  ಹೊಸೆಯುತ್ತಾ " ಅಲ್ಲ ಯಡಿಯೂರಪ್ಪ ರಾಜೀನಾಮೆ ಕೊಡೋದೇ ಇಲ್ವಂತಲ್ಲ ಮಾರಾಯ "  ಎಂತಲೋ ಇನ್ನೇನೋ ಹೇಳಿ ಆ ಕ್ಷಣದ ಸುದ್ದಿಯನ್ನು ಅಪ್ ಡೇಟ್ ಮಾಡಿದ ನೆನಪು.. ..
ನನ್ನ ಕಣ್ಣುಗಳಿಂದ ಬೀಳುತ್ತಿದ್ದ ಹನಿಗಳಿಗೂ ಅಮ್ಮನ ಪಾದದ ಬಿಸಿಯನ್ನು ಆರಿಸುವ ಭಾಗ್ಯವಿರಲಿಲ್ಲ.... ಏಕೆಂದರೆ ಅಮ್ಮನ ಆ ಕಾಲು ಆ ಕ್ಷಣ ನನ್ನ ಕಣ್ಣೀರ ಪರಿಧಿಯಿಂದ ಆಚೆ ತೀರದಲ್ಲಿತ್ತು............
(ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದು ಇಲ್ಲಿ ಈಗ ಪ್ರಕಟಿಸುತ್ತಿದ್ದೇನೆ.)
ಅಮ್ಮ ಕಾಲವಾಗಿ ಇಂದಿಗೆ ಮೂರು ತಿಂಗಳು. ನೆನಪುಗಳು ಮಳೆಯ ಜೊತೆಗೇ ಸುರಿಯುತ್ತವೆ. ನಾವು ಮನಸ್ಸು ಕೊಡಬೇಕಷ್ಟೆ. ...... ಅಮ್ಮ ಹೋದ ದಿನ ಅಲ್ಲಿ ಸೇರಿದವರು-ವಿಶೇಷವಾಗಿ ನಮ್ಮೂರ ಜನ- ತೋರಿದ ಸಹಕಾರ ಮರೆಯುವಂಥದ್ದಲ್ಲ. ಹಳ್ಳದ ಈಚೆ ಕಡೆ ಬಿಳುವಿನಕೊಪ್ಪ ಮತ್ತು  ರಾಮಸ್ವಾಮಿ ಮನೆಯಿಂದ ಪ್ರಾರಂಭಿಸಿ ಆಚೆ ಕಡೆ ಪುರುಷೋತ್ತಮ, ಕಮ್ಮಕ್ಕಿ ರವಿ ಮನೆಯವರವರೆಗೆ - ಜನ ತೊರಿದ ಸಹಕಾರ ಮರೆಯುವಂಥದ್ದಲ್ಲ. ನನ್ನ ಸ್ನೇಹಿತ ನಾರಾಯಣ್ "ನೀವು ಆ ಸಂಬಂದವನ್ನು ಉಳಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ " ಎಂದು ಹೇಳುತ್ತಿದ್ದರು..  ಅದು ಅಮ್ಮಗಳಿಸಿದ ವಿಶ್ವಾಸವೇ? ನನ್ನ ತಮ್ಮಂದಿರು-ಉಮೇಶ, ರವಿ- ಸಂಪಾದಿಸಿದ್ದೇ ? ಅಥವಾ ಅಮ್ಮನ ಭಾಷೆಯಲ್ಲಿ ಹೇಳುವುದಾದರೆ ಪೂರ್ವಾರ್ಜಿತ ಪುಣ್ಯವೇ?  ಎಲ್ಲವೂ ಹೌದಿರಬಹುದು. ಆದರೆ ನನ್ನ ಪ್ರಕಾರ  ಅದಕ್ಕಿಂತ ಮುಖ್ಯವಾಗಿ ಅದು ನಮ್ಮೂರಿನ-ಹೊಕ್ಕಳಿಕೆಯ-ಗುಣ ವಿಶೇಷ. ನಮ್ಮ ನಮ್ಮಲ್ಲಿ ಭಿನ್ನಾಭಿಪ್ರಾಯವಿಲ್ಲವೆಂದಲ್ಲ. ಆದರೆ ಕಷ್ಟ-ಸುಖದಲ್ಲಿ ಅದನ್ನೆಲ್ಲ ಲೆಕ್ಕ ಹಾಕುತ್ತಾ ಯಾರೂ ಕುಳಿತುಕೊಳ್ಳುವುದಿಲ್ಲ. ನಮ್ಮೂರಿನವರು ಪರಸ್ಪರ ತೋರಿಸುವ ಆಸ್ಥೆಯೇ ಅಂಥದ್ದು. ಅಮ್ಮ ತೀರಿಕೊಂಡದ್ದು ಬೆಳಿಗ್ಗೆ ಸುಮಾರು ಹತ್ತು ಗಂಟೆಯ ಹೊತ್ತಿಗೆ. ಅಂತ್ಯ ಕ್ರಿಯೆ ಶುರುವಾದದ್ದು ಮರುದಿನ ಬೆಳಿಗ್ಗೆ. ಸುಮಾರು ಇಪ್ಪತ್ತನಾಲ್ಕು ಗಂಟೆಗಳ ಕಾಲ ನಮ್ಮ ಮನೆಯಲ್ಲಿ  ನಮ್ಮ ಊರಿನ ಹಲವಾರು ಜನ ಇದ್ದೇ ಇರುತ್ತಿದ್ದರು- ಶಿಫ್ಟಿನ ಮೇಲೇನೋ ಎಂಬಂತೆ. ಅದರಲ್ಲೂ ರಾತ್ರಿ ಅಮ್ಮನನ್ನು ಕಾಯುತ್ತಾ ಕೂರುವ ......... ಏನೆಂದು ಹೇಳಲಿ ಅಂಥ ಕೆಲಸಕ್ಕೆ ನಮ್ಮೂರಿನ ಸುಮಾರು ಹತ್ತು ಹದಿನೈದು ಜನ ರಾತ್ರಿ ಇಡೀ ಕಣ್ಣು ಮುಚ್ಚದೇ  ಅದೂ ಇದೂ ಮಾತಾಡುತ್ತಾ ಕೂತೇ ಇದ್ದರು. ಅದರಲ್ಲೂ ಪುರುಷೋತ್ತಮ, ಪ್ರಭಾಕರ ನಂಥ ಹಿರಿಯರು ಕೂತದ್ದು ನಾನು ಮರೆಯಲಾರೆ. ಜೊತೆಗೆ ಮಾಧವ ಮಾವ ರಾತ್ರಿ ಇಡೀ ಕಣ್ಣು ಮುಚ್ಚದೇ ಕೂತಿದ್ದ..... ಬೆಳಗಾಯಿತು.....ಆಗಲೇ ಬೇಕು..... ಆದರೆ, ಎಂದಿನಂತೆ ನಾವು ಏಳುವ ಹೊತ್ತಿಗೆ ಮುಚೆಕಡೆ ಗುಡಿಸುತ್ತಲೋ, ಹೂ ಕುಯ್ಯುತ್ತಲೋ, ಮಕ್ಕಳಿಗೆ ಮುಖ ತೊಳೆಸುತ್ತಲೋ ಯಾವುದೋ ಬಾಗಿಲಲ್ಲಿ ಕಾಣುತ್ತಿದ್ದ ಅಮ್ಮನ  ಮುಖ ಇನ್ನು ಕಾಣುವಂತಿರಲಿಲ್ಲ.... ಸಣ್ಣವನಿದ್ದಾಗ ಬೆಳಿಗ್ಗೆ ಅರೆ ನಿದ್ರೆಯಲ್ಲಿ, ಅಮ್ಮ ರೇಡಿಯೋದಲ್ಲಿ ಕೇಳಿಸುತ್ತಿದ್ದ ಭಕ್ತಿ ಗೀತೆಗಳೇ ಈಗಲೂ ನನ್ನ ಅತ್ಯಂತ ಅಚ್ಚುಮೆಚ್ಚು. ಅವುಗಳ ಸಂಗೀತದ ಕಾರಣಕ್ಕೋ, ಅಥವಾ ಸಾಹಿತ್ಯದ ಕಾರಣಕ್ಕೋ ಅಲ್ಲ. ಅವುಗಳನ್ನು ನಾನು ಕೇಳಿದ್ದ ಕಾಲದ ನೆನಪನ್ನು ಹೊತ್ತು ತರುವ ಕಾರಣಕ್ಕೆ...... ಪ್ರಭಾಕರ ಬಂದು " ಸ್ನಾನ ಮಾಡಿ" ಎಂದ. ಊರವರು ಒಬ್ಬೊಬ್ಬರಾಗಿ ಬರಲು ಪ್ರಾರಂಭಿಸಿದರು....... ನಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೆ ಜನ ಸೇರಿದಾಗ ನಮ್ಮ ತಪ್ಪುಗಳನ್ನು ಹುಡುಕಿ ಗದರುತ್ತಿದ್ದ ಅಮ್ಮ ಇರಲಿಲ್ಲ......

Sunday, 26 May 2013

ಆಪರೇಷನ್ ಎಮ್ಮೆ


ಮೇ 19 ರ ಭಾನುವಾರ. ಹೊಸಮನೆಯಲ್ಲಿದ್ದೆ. ಬೆಳಿಗ್ಗೆಯೇ ತಮ್ಮ ಉಮೇಶನಿಗೆ ಪಕ್ಕದ ಮನೆಯ (ಪಕ್ಕ ಅಂದರೆ ಅರ್ಧ ಕಿಲೋಮೀಟರ್‍ ದೂರ) ಶ್ರೀಪಾದನ ಫೋನು. '' ನಿಮ್ಮ ಎಮ್ಮೆ ಸಣ್ಣ ಉಬ್ಬಿನ ಹತ್ರ ಕೆರೆಯ ಕೆಸರಿನಲ್ಲಿ ಹೂತು ಹೋಗಿದೆ.''



ಶುಕ್ರವಾರ ಒಂದು ಎಮ್ಮೆ ಮನೆಗೆ ಬಂದಿರಲಿಲ್ಲ. ಶನಿವಾರ ಅಮ್ಮನ ಮಾಸಿಕ. ಆ ಗಡಿಬಿಡಿಯಲ್ಲಿ ಹುಡುಕಲು ಹೋಗಲಿಲ್ಲ. ಬಿರುಬೇಸಿಗೆಯ ದಿನಗಳು. ಮಲೆನಾಡಿಲ್ಲೂ ಮಳೆ ಇಲ್ಲ. ಮನೆಯಿಂದ ಹೊರಟ ಎಮ್ಮೆ ಅಲ್ಲಿ ಇಲ್ಲಿ ಮೇಯ್ದು ಬಾಯಾರಿ ಕೆರೆಯ ನೀರು ಕುಡಿಯಲು ಹೋಗಿದೆ. ಬತ್ತಿ ಹೋದ ಕೆರೆಯ ಮಣ್ಣಲ್ಲಿ ಹೂತು ಮೇಲೆ ಬರಲಾಗದೇ ಮಲಗಿದೆ.

ಶ್ರೀಪಾದನ ಮನೆಯ ಒಂದು ಎಮ್ಮೆಯೂ ಮನೆಗೆ ಬಂದಿರಲಿಲ್ಲ. ಆತ ಅದನ್ನು ಹುಡುಕಿಕೊಂಡು ಹೋದವನು. ಕಂಡಿದ್ದು ನಮ್ಮ ಎಮ್ಮೆಯನ್ನು. ವಾಸ್ಕೋಡಗಾಮನೋ ಯಾರೋ, ಇಂಡಿಯಾವನ್ನು ಹುಡುಕಿಕೊಂಡು ಹೋಗಿ ವೆಸ್ಟ್ ಇಂಡೀಸ್ ಸಿಕ್ಕಿತಂತಲ್ಲ ಹಾಗೆ. ಅವನ ಮನೆ ಎಮ್ಮೆಯ ಬದಲು ನಮ್ಮ ಎಮ್ಮೆ ಕಂಡಿದೆ.



ಉಮೇಶ ಬೈಕನ್ನೇರಿ ರವಿಯ ಜೊತೆ ಹೋದ. ಹುಡುಗರು - ಉಜ್ವಲ, ರಾಜು, ಸುದರ್ಶನ, ಉತ್ತಮ - ತಾವೂ ಬರುತ್ತೇನೆಂದರು. ಅವರ ಜೊತೆ ನಾನೂ ಸುರೇಶ ಹೋದೆವು. ನಾವು ಹೋಗುವುದರಲ್ಲಿ ಆಪರೇಷನ್ ಎಮ್ಮೆ ಶುರುವಾಗಿತ್ತು. ಹಿಂಬದಿಯ ಕಾಲುಗಳ ಪಕ್ಕ ಹಗ್ಗ ಹಾಕಿ ರವಿ ಎಳೆಯುತ್ತಿದ್ದ. ಉಮೇಶ, ಶ್ರೀಪಾದ ಕೋಡು ಹಿಡಿದು ಎಳೆಯುತ್ತಿದ್ದರು. ನಾನು , ಸುರೇಶ ರವಿಗೆ ಸಹಾಯ ಮಾಡಿದೆವು. ಎಮ್ಮೆ ಸ್ವಲ್ಪ ಸ್ವಲ್ಪವೇ ಮೇಲೆ ಬರಲಾರಂಭಿಸಿತು.


ನಾನು ಮೊಬೈಲ್ ತಂದಿರಲಿಲ್ಲ. ರಾಜುಗೆ ಫೋಟೋ ತೆಗೆಯಲು ಹೇಳಿದೆ. (ಅವನು ಹಳೇ ರಾಜಕುಮಾರ್‍ ಸಿನಿಮಾದ ಥರ 20 ರೀಲ್ ಸುತ್ತಿದ)



ಎಮ್ಮೆ ಕೆಸರಿಂದ ಮೇಲೆ ಬಂದಿತಾದರೂ ನಿಲ್ಲಲು ಶಕ್ತಿ ಇರಲಿಲ್ಲ. ನಾನು ಉತ್ತಮ ಮನೆಗೆ ಹೋಗಿ ಹಿಂಡಿ, ಬಿಸಿನೀರು, ಒಂದು ಕಟ್ಟು ಹುಲ್ಲು ತಂದೆವು. ನಾವು ಬರುವಷ್ಟರಲ್ಲಿ ಎಮ್ಮೆ ಕೆರೆಯಂಗಳದಿಂದ ಬಹಳ ಮೇಲೆ ಬಂದು  ನಿಂತಿತ್ತು. ಮೆತ್ತಗಿನ ಕೆಸರಾದ್ದರಿಂದ ಮೈ ಮೇಲೆ ಗಾಯಗಳಾಗಿರಲಿಲ್ಲ. ಮೂಳೆಗೂ ಏಟಾಗಿರಲಿಲ್ಲ. ವಾಟರ್‍ ಬೆಡ್ ಮೇಲೆ ಮಲಗಿದ ಹಾಗಿರಬೇಕು. ಕಾಲುಗಳು ಅಲ್ಲಾಡಿಸದೇ ಎರಡು ದಿನ ಇದ್ದದ್ದರಿಂದ ಚೋಮು ಹಿಡಿದಿರಬಹುದು. ನಾವು ತಂದ ಬಿಸಿನೀರಿಂದ ರವಿ ಮೈ ತೊಳೆದ. ಹಿಂಡಿ, ಹುಲ್ಲು ತಿನ್ನಲು ಕೊಟ್ಟ ಸ್ವಲ್ಪ ಹೊತ್ತಿನ  ಮೇಲೆ ಎಮ್ಮೆ ಚೇತರಿಸಿಕೊಂಡಿತು.



ಮಲೆನಾಡಿನಲ್ಲಿ ಇಂಥ ಘಟನೆಗಳು ನಡೆಯುತ್ತಲೇ ಇರುತ್ತವೆ. ಕಳೆದು ಹೋದ ಎಮ್ಮೆಯನ್ನೋ, ದನವನ್ನೋ ಹುಡುಕಿಕೊಂಡು ಕಾಡು ಮೇಡು ಅಲೆಯುವುದು. ಸಿಗದಿದ್ದಾಗ ನಿಮಿತ್ಯ ಕೇಳುವುದು, ಪ್ರಶ್ನೆ ಕೇಳುವುದು ಸಾಮಾನ್ಯ. ಇಂಥ ಚಿಕ್ಕ ಚಿಕ್ಕ ಘಟನೆಗಳಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆ ಮುಖ್ಯ. ಇವೇ ಮಕ್ಕಳ ಭಾವ ಜಗತ್ತನ್ನು ಸಮೃದ್ಧಗೊಳಿಸುತ್ತವೆ. ಒಬ್ಬ ವ್ಯಕ್ತಿ ಸುತ್ತಮುತ್ತಲಿನ ಜನ, ಜಾನುವಾರು, ಪ್ರಕೃತಿ, ಸಂಸ್ಕೃತಿಗೆ ಹತ್ತಿರವಾಗುವುದು ಹೀಗೆ. ಅಲ್ಲಿ ನಮ್ಮ ಮಕ್ಕಳು ಏನೇನನ್ನು ತಮ್ಮ ಭಾವ ಜಗತ್ತಿನಲ್ಲಿ ತುಂಬಿಕೊಂಡರೋ ಅದನ್ನು ಹತ್ತು ಬೇಸಿಗೆ ಶಿಬಿರಗಳೂ ತುಂಬಲಾರವು. ಜೊತೆಗೆ ತೇಜಸ್ವಿಯಂಥವರನ್ನು ಓದಲು ಪ್ರಾರಂಭಿಸಿದರೆ ಅನುಭವದ ಜಗತ್ತು ಓದಿನೊಂದಿಗೆ ಸೇರುತ್ತಾ, ಓದಿದ್ದು ಅನುಭವದ ಬೆಳಕಲ್ಲಿ ಕಾಣುತ್ತಾ ಹೊಸದೊಂದು ಪ್ರಪಂಚವೇ ತೆರೆಯುತ್ತದೆ. ಇದು ವ್ಯಕ್ತಿಯ ಸಾಂಸ್ಕೃತಿಕ ಶ್ರೀಮಂತಿಕೆಗೆ ಕಾರಣವಾಗುತ್ತದೆ.

ಇಷ್ಟಾದರೂ ರಾಜು ತೆಗೆದ ವೀಡಿಯೋ ದೃಶ್ಯಗಳು ನನ್ನ ಫೋನ್ ಗೆ ಟ್ರಾನ್ಸ್ ಫರ್‍ ಆಗಲೇ ಇಲ್ಲ ಇವು ನಾನು ತೆಗೆದ '' ಆಪರೇಷನ್ ಎಮ್ಮೆ '' ಯ ಉತ್ತರಾರ್ಧದ ಫೋಟೋಗಳು..


Tuesday, 2 April 2013

ನಿನ್ನೆ ಮೈಸೂರಿನಲ್ಲಿ ಒಂದು ಟಾಯ್ಲೆಟ್ ಗೆ ಹೋಗಿದ್ದೆ. ನೀರು ಟ್ಯಾಂಕ್ ತುಂಬಿ ಸುರಿದು ಹೋಗುತ್ತಿತ್ತು. ನೀರು ಚೆಲ್ಲಿ ಹೋಗುತ್ತಿದೆಯಲ್ಲಪ್ಪಾ ಅಂದೆ. ಅದನ್ನು ನೋಡಿಕೊಳ್ಳುವಾತ ಹ್ಞೂ ಸಾರ್‍ ಅಂದ. ನಿಲ್ಲಿಸೋಕೆ ಆಗಲ್ವೆ ? ಎಂದು ಕೇಳಿದರರೆ ಇಲ್ಲ ಎಂಬ ಉತ್ತರ. ನೀರಿಗೆ ಬಹಳ ಕಷ್ಟ ಅಂದೆ. ನಮಗೆ ಬೇಜಾನ್ ಬತ್ತದೆ ಅಂದ.ಪ್ರಾಕೃತಿಕ ಸಂಪನ್ಮೂಲಗಳನ್ನು ನಮ್ಮ ಸ್ವಂತ ಆಸ್ತಿಯ ಹಾಗೆ ಪೋಲು ಮಾಡಿದರೆ ಹೇಗೆ ? ನಾವು ವ್ಯರ್ಥ ಮಾಡುವ ಒಂದೊಂದು ಗುಟುಕು ನೀರೂ ಇನ್ನೊಬ್ಬ ಬಾಯಾರಿ ದಣಿದವನ ದಾಹ ತೀರಿಸಬಲ್ಲ ಅಮೂಲ್ಯ ಜೀವ ಜಲ ಎಂದು ನಾವು ತಿಳಿಯದಿದ್ದರೆ ಹೇಗೆ ? ಹೀಗಾಗಿಯೇ ಕನ್ನಡಿಗನ ಕಷ್ಟ ತಮಿಳರಿಗೆ, ತಮಿಳಿಗನ ಕಷ್ಟ ಕನ್ನಡಿಗರಿಗೆ ಅರ್ಥವಾಗದೇ ಇದೆಯೇ ? ಗ್ಲೋಬಲೈಜೇಷನ್ ನಿಂದ ಹೀಗೆ ಭೂಮಿಯ ಒಂದು ತುದಿಯಲ್ಲಿರುವವನ ಕಷ್ಟ ಇನ್ನೊಂದು ತುದಿಯಲ್ಲಿರುವವನಿಗೆ ಅರ್ಥವಾಗಿ ಪರಸ್ಪರ ಸಹಾಯ ಹಸ್ತ ನೀಡಬಹುದು ಎಂದು ನನ್ನಂತಹವರು ಭಾವಿಸಿದ್ದೆವು. ಹಾಗಾಗಲಿಲ್ಲವಲ್ಲ. ! ಇದು ಕಟ್ಟ ಕಡೆಯ ಮನುಷ್ಯನ ಮಾತಾಯಿತು. ಬಿಡಿ.

ಇನ್ನು ವಿಶ್ವದ ಶ್ರೇಷ್ಟ ಆರ್ಥಿಕ ತಜ್ಞ, ನಮ್ಮ ಪ್ರಧಾನಿ ಮನಮೋಹನಸಿಂಗರ ಮುಕ್ತ ಆರ್ಥಿಕ ನೀತಿಯಿಂದ ಭಾರತಕ್ಕೆ ಅವಕಾಶದ ಬಾಗಿಲುಗಳೇ ತೆರೆದು ಆಲಗೂಡು ಕೆರೆಯ ಮಣ್ಣಲ್ಲಿ ಬೆಳೆದ ಕೊತ್ತಂಬರಿ, ಪುದಿನ ಸೊಪ್ಪನ್ನು ಅಮೆರಿಕಾದ ಬೀದಿಗಳಲ್ಲಿ ಮಾರಬಹುದು ಎಂಬ ನನ್ನಂತಹವರ ಕಲ್ಪನೆ ಸುಳ್ಳಾಗಿದೆ. ಈಗ ನಮ್ಮ ಹಿತ್ತಲಲ್ಲಿ ಬೆಳೆದು ಲಿಂಕ್ ರಸ್ತೆಯ ಮರದ ಅಡಿಯಲ್ಲಿ ಮಾರುತ್ತಿರುವ ಕರಬೂಜ ಹಣ್ಣೂ ಕೂಡ ಇನ್ನು ಮುಂದೆ ವಾಲ್ ಮಾರ್ಟ ರಕ್ಕಸನ ಕೈಗೆ ಸಿಕ್ಕು ಅವನ ಮಾರ್ಟಿನ ತಂಪು ಗಾಜಿನ  ಬೀರೊಳಗೆ ಕೂತು ನನ್ನಂತಹವನನ್ನು ಅಣಕಿಸುತ್ತವೆ.

ಮಾಜಿ ಪ್ರಧಾನಿ ದೇವೇಗೌಡರಂತಹ - ರೈತರನ್ನು ಅರ್ಥಮಾಡಿಕೊಂಡಿದ್ದಾರೆ, ಅವರ ಪರವಾಗಿದ್ದಾರೆ ಎಂದು ನಾವು ತಿಳಿಯಬಹುದಾದ - ನಾಯಕರೇ " ಆರ್ಥಿಕ ನೀತಿಯ ರಿವರ್ಸ್ ಗೇರ್‍ ಸಾಧ್ಯವಿಲ್ಲ. " ಎಂದು ಪ್ರಧಾನಿಯಾಗಿದ್ದಾಗಲೇ ಹೇಳಿಬಿಟ್ಟಿದ್ದಾರಲ್ಲ. !

ಹರಕೊಲ್ಲಲ್ ಪರಕಾಯ್ವನೇ..... 

Saturday, 31 December 2011

2011 ಜಾರಿ ಹೋಗುವ ಮುನ್ನ ಒಂದೆರಡು ಸಾಲು


ಬರೆಯಬೇಕೆನಿಸಿದ್ದನ್ನೆಲ್ಲಾ ಬರೆಯುವ ಹಾಗಿಲ್ಲ
ವೆಬ್ ಮೇಲೆ ಸಿಬಲ್ ಕಣ್ಣು ಉಂಟಲ್ಲ
ಆದರೂ.. ಥೇನ್ ಛಳಿಗೆ ನಡುಗಿ
ಸ್ವೆಟರ್ ತೊಟ್ಟ ಹುಡುಗಿ ಸುಂದರವಾಗಿ ಕಂಡದ್ದು ಸುಳ್ಳಲ್ಲವಲ್ಲ !
ಅಣ್ಣಾ ಗುಂಪು ಸಾಮಾಜಿಕ ಹೋರಾಟಗಾರರು ಎಂದುಕೊಂಡು ರಾಜಕೀಯ ಮಾಡುವುದು ಯಾಕೆ?
ರಾಜಕಾರಣಿಗಳು ಬರೀ ರಾಜಕೀಯ ಮಾಡಿ ಸಾಮಾಜಿಕ ಕಾಳಜಿ ಮರೆಯುವುದು ಯಾಕೆ ?
ಮಡೆ ಸ್ನಾನ ಮಾಡಿದರೆ ಕೆಲವರ ಗಲಾಟೆ
ಎಣ್ಣೆ ಸ್ನಾನ ಮಾಡಿ ಮಾಡಿದವರದೇ ಗಲಾಟೆ
ಅಧಿಕಾರ ಸಿಗದಿದ್ದರೆ ಸಿಗಲಿಲ್ಲ ಎಂದು ಸಮಾವೇಶ
ಸಿಕ್ಕರೆ ಬಿಡಲ್ಲ ಎಂದು ಸಮಾವೇಶ
ರೆಡ್ಡಿಗೆ ಜಾಮೀನು ಸಿಕ್ಕಿಲ್ಲ ; 
ಲೋಕಪಾಲ ಸದನದಲ್ಲಿ ಪಾಸಾಗಲಿಲ್ಲ.
ಸಂಕ್ರಾಂತಿಯ ನಂತರ ಯಡ್ಡಿ ಸುಮ್ಮನಿರಲ್ಲ
ರೇಣುಕಾಚಾರ್ಯ ಬಾಯಿ ಮುಚ್ಚಲ್ಲ.....
ಊರಲ್ಲಿ ತಮ್ಮನ ಗದ್ದೆ ಕೊಯ್ಲು ಆಗಿಲ್ಲ
"ಪಾರ್ಟಿ ಮಾಡೋಣ" ಎಂದಿದ್ದ ಗೆಳೆಯ ಬಂದಿಲ್ಲ
ಟಿಕ್...ಟಿಕ್.... ಹನ್ನೆರಡು ಹತ್ತಿರ ಬರುತ್ತಿದೆ..
ಖುಷಿಯೋ, ಬೇಜಾರೋ ಗೊತ್ತಾಗುತ್ತಿಲ್ಲ........

Wednesday, 28 December 2011

ಕನ್ನಡ‌


ಕನ್ನಡದ ವಿಷಯ ಮತ್ತೆ ಮತ್ತೆ ಚರ್ಚೆಯ ಮಂಚೂಣಿಗೆ ಬರುತ್ತಿದೆ. ಒಂದು ಕಡೆ ಕನ್ನಡದ ಸಾಹಿತಿಗಳಿಗೆ ಜ್ಞಾನ ಪೀಠ ಸಿಗುತ್ತಿದೆ. ಕನ್ನಡದ ಸಿನಿಮಾಗಳು ರಾಷ್ಟ್ರೀಯ, ಅಂತರ ರಾಷ್ಟೀಯ ಮಟ್ಟದಲ್ಲಿ ಪ್ರಶಸ್ತಿ ಗಳಿಸುತ್ತಿವೆ. ಕನ್ನಡ ಭಾಷಿಕರು ವಿದೇಶಿ ನೆಲದಲ್ಲಿ ಕನ್ನಡದ ಕಹಳೆ ಮೊಳಗಿಸುತ್ತಾರೆ. ಆದರೂ ಇವು ಯಾವುದೂ ಭಾಷೆಯ ಅವನತಿಯ ನಮ್ಮ ಗಾಬರಿಯನ್ನು ಕಡಿಮೆ ಮಾಡುತ್ತಿಲ್ಲ ಏಕೆ?
ಮುಖ್ಯವಾಗಿ ಚರ್ಚೆಯ ಸಂದರ್ಭಗಲ್ಲಿ ತಾತ್ವಿಕ ಸ್ಪಷ್ಟತೆ ಇಲ್ಲದೆ ಯಾರು ಏನು ಹೇಳುತ್ತಿದ್ದಾರೆ ಎಂದು ಗೊತ್ತಾಗದೆ ಗದ್ದಲವೇ ಕೇಳಿಸುತ್ತಿದೆ. ಹಾಗಾಗಿ ಇದು ಇಂಗ್ಲೀಷ್ ಬೇಕು ಬೇಡ ಎಂಬುದರ ಚರ್ಚೆಯೋ, ಕನ್ನಡ ಬೇಕು ಬೇಡ ಎಂಬುದರ ಚರ್ಚೆಯೋ ಆಗಿ ಬಿಡುತ್ತಿದೆ.ಭಾಷೆಯ ಚರ್ಚೆಯೋ, ಮಾದ್ಯಮದ ಚರ್ಚೆಯೋ ತಿಳಿಯುವುದಿಲ್ಲ. ಯಡಿಯೂರಪ್ಪನವರು ಮುಖ್ಯ ಮಂತ್ರಿಯಾಗಿದ್ದಾಗ ನಮ್ಮ ತಂಟೆಗೆ ಬಂದರೆ ನಿಮ್ಮ ಪುರಾಣವನ್ನು ಬಿಚ್ಚುತ್ತೇನೆ ಎಂದು ಕಡತ ತೋರಿಸಿ ಹೆದರಿಸಿದ ಹಾಗೆ ಕನ್ನಡ ಬೇಕು ಎಂದು ಹೇಳುವವರಿಗೆ ನಿಮ್ಮ ಮಕ್ಕಳು ಮೊಮ್ಮಕ್ಕಳು ಇಂಗ್ಲೀಷ್ನಲ್ಲಿ ಓದುತ್ತಿಲ್ಲವೇ ಎಂದು ಕೇಳುವಂತಾಗಿದೆ.ಇಂಗ್ಲೀಷ್ ಬೇಕು ಎಂದು ಹೇಳುವವರು ನಮ್ಮ ಮಕ್ಕಳಿಗೆ ಉದ್ಯೋಗ ಬೇಕು. ಹಾಗಾಗಿ ಇಂಗ್ಲೀಷ್ ಬೇಕು ಎನ್ನುತ್ತಿದ್ದಾರೆ. ಎರಡೂ  ವಾಸ್ತವ. ವಾಸ್ತವವಾಗಿ ಎರಡು ಭಾಷೆಗಳು ಬೇಕು.
ಇದಕ್ಕೆ ಸಂಬಂದಿಸಿದ ಹಾಗೆ ಅಂಕಣಕಾರ ರಾಮಚಂದ್ರ ಗುಹಾ ನವಂಬರ್ ೪ ರ ಪ್ರಜಾವಾಣಿಯಲ್ಲಿ ಬರೆದಿದ್ದಾರೆ. ( ನಾನು ಅದನ್ನು ಕಾರಣಾಂತರದಿಂದ ತಡವಾಗಿ ಓದಿದೆ) ಅದರಲ್ಲಿ ಅವರು ದ್ವಿಭಾಷಿಕತೆಯ ಬಗ್ಗೆ ಪ್ರಸ್ತಾಪಿಸಿತ್ತಾರೆ. ಬಾಲ್ಯವನ್ನು ವಿದೇಶದಲ್ಲಿ ಕಳೆಯಬೇಕಾಗಿ ಬಂದ ಗಾಂಧಿಯ ಮಕ್ಕಳಿಗೆ ಗಾಂಧಿಯ ಹಟದಿಂದಾಗಿ ಅವರ ಮಾತೃ ಭಾಷೆ ಹಾಗು ಅಲ್ಲಿನ ಪರಿಸರದಿಂದಾಗಿ ಇಂಗ್ಲೀಷ್ ಎರಡು ದಕ್ಕುತ್ತವೆ.
ಮುಖ್ಯವಾಗಿ ನಮ್ಮನ್ನಾಳುವ, ಶಿಕ್ಷಣ ನೀತಿ ರೂಪಿಸುವವರಿಗೆ ತಾತ್ವಿಕ ಸ್ಪಷ್ಟತೆಯೇ ಇಲ್ಲ. (ಅಥವಾ ತಾತ್ವಿಕತೆಯೇ ಇಲ್ಲ ಎಂದರು ಸರಿಯಾದೀತು) ಹಾಗಾಗಿ ಏಕ ಕಾಲಕ್ಕೆ ಎರಡು ತಪ್ಪುಗಳಾಗುತ್ತಿವೆ. ಗಾಂಧೀಜಿಯ ಮಕ್ಕಳಿಗೆ ಸಹಜವಾಗಿ ದಕ್ಕಿದ ದ್ವಿಭಾಷಿಕತೆ ನಮ್ಮಲ್ಲಿ ಯಾವ ವರ್ಗಕ್ಕೂ ಸಾಧ್ಯವಾಗುತ್ತಿಲ್ಲ. ಒಂದು ವರ್ಗದ ಜನ ಪ್ರಜ್ಞಾಪೂರ್ವಕವಾಗಿ ಇಂಗ್ಲಿಷನ್ನು ಕಲಿತು, ಕನ್ನಡ ಮರೆತು - ಅನಂತಮೂರ್ತಿಯವರ ಭಾಷೆಯಲ್ಲಿ ಹೇಳುವುದಾದರೆ - ಸಾಂಸ್ಕೃತಿಕ ಬೇರುಗಳಿಗೆ ಸಂಪೂರ್ಣವಾಗಿ ವಿಮುಖರಾಗುತ್ತಿದ್ದಾರೆ. ಇನ್ನೊಂದು ವರ್ಗದ ಜನ ಮುಚ್ಚುವ ಸ್ಥಿತಿಗೆ ಬಂದ ಸರ್ಕಾರಿ ಶಾಲೆಗಳಿಂದ , ಸರ್ಕಾರದ ತಪ್ಪು ನೀತಿಗಳಿಂದ ಅಥವಾ ದ್ವಂದ್ವ ನೀತಿಗಳಿಂದ ಶಿಕ್ಷಣದಿಂದಲೇ ವಂಚಿತರಾಗುತ್ತಿದ್ದಾರೆ. ಕನ್ನಡದ ಕೋಲು ಹಿಡಿದು ಸರ್ಕಾರವನ್ನು ಹೆದರಿಸುವವರು ಈ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಪಂಚಕ್ಕೆ ತೆರೆದುಕೊಳ್ಳಲು, ಉದ್ಯೋಗ ಗಿಟ್ಟಿಸಲು ಇಂಗ್ಲೀಷ್ ಬೇಕು ಎನ್ನುವ ಹಾಗು ನಮ್ಮತನ, ಸಂಸ್ಕೃತಿ ಉಳಿಸಿಕೊಳ್ಳಲು ಕನ್ನಡ ಬೇಕು ಎನ್ನುವ ಎರಡು ವಾದಗಳ ನಡುವೆ ವಾಸ್ತವ ಇದೆ.
ನಾನು ತಿಳಿದಂತೆ ನಮ್ಮ ಕನ್ನಡಿಗ ಮೇಲು ವರ್ಗದ ಮಂದಿಯಲ್ಲಿ ಇರುವಷ್ಟು ಮಾತೃ ಭಾಷೆಯ ಬಗೆಗಿನ ಅವಜ್ಞೆ ಬೇರೆ ಕಡೆ ಕಾಣೆ. ಉದಾಹರಣೆಗೆ ನನ್ನ ಸ್ನೇಹಿತರೊಬ್ಬರು ಕಂಪನಿಯೊಂದರ ಮಾರಾಟ ವಿಭಾಗದಲ್ಲಿ ಕೆಲಸ ಮಾಡುತ್ತಾರೆ. ಅವರು ಹೇಳುತ್ತಾರೆ : ತಮಿಳುನಾಡು, ಕೇರಳ, ಆಂದ್ರ ಎಲ್ಲೇ ಹೋದರೂ ಅಲ್ಲಿಯ ಕಂಪನಿಯ ಮುಖ್ಯಸ್ಥರು ನನ್ನ ಹತ್ತಿರ ಮಾತ್ರ ಇಂಗ್ಲೀಷ್ ನಲ್ಲಿ ಮಾತಾಡುತ್ತಾರೆ. ಅವರ ಸಹವರ್ತಿಗಳ ಜೊತೆಗೆ ಅವರ ಮಾತೃ ಭಾಷೆಯಲ್ಲಿಯೇ ವ್ಯವಹರಿಸುತ್ತಾರೆ. ಆದರೆ ಕರ್ನಾಟಕದಲ್ಲಿ ಮಾತ್ರ ಪರಿಸ್ಥಿತಿ ಭಿನ್ನ.
ನಾವು ಈ ವಿಷಯದಲ್ಲಿ ನಮ್ಮ ನಾಡಿನವರೇ ಆದ ತುಳು ಭಾಷಿಕರಿಂದ ಕಲಿಯಬಹುದು. ಇತ್ತೀಚಿಗೆ ಒಂದು ನಾಗಮಂಡಲ ಕಾರ್ಯಕ್ರಮದಲ್ಲಿ ಚನ್ನೈನಲ್ಲಿ ನೆಲೆಸಿರುವ ಒಂದು ತುಳು ಕುಟುಂಬವನ್ನು ಕಂಡೆ. ಚನ್ನೈನಲ್ಲೇ ಹುಟ್ಟಿ ಬೆಳೆದ ಅವರ ಮಗನಿಗೆ ತಮಿಳು ಗೊತ್ತು, ತುಳು ಗೊತ್ತು. ಕನ್ನಡ ಇಲ್ಲ. ರಾಜಾಸ್ಥಾನದಿಂದ ಬಂದು ಇಲ್ಲಿ ನೆಲೆಸಿರುವ ವ್ಯಾಪಾರಸ್ಥ ಕುಟುಂಬಗಳ ಇಲ್ಲಿಯೇ ಹುಟ್ಟಿ ಬೆಳೆದ ಮಕ್ಕಳು ರಾಜಾಸ್ಥಾನಿ ಭಾಷೆಯಲ್ಲಿಯೇ ಅವರ ವ್ಯವಹಾರದ ಲೆಕ್ಕ ಪತ್ರಗಳನ್ನು ಬರೆಯುವುದನ್ನು ನೋಡಿದ್ದೇನೆ.
ನಮ್ಮತನವನ್ನು ಉಳಿಸಿಕೊಳ್ಳಬೇಕು. ಅದು ಎಲ್ಲ ವರ್ಗದವರಿಗೂ ಆವಶ್ಯ. ನಮ್ಮ ಹೆಸರಿನ ಹಿಂದೆ ನಮ್ಮ ಊರು, ತಂದೆಯ ಹೆಸರನ್ನು ಇನಿಷಿಯಲ್ಸ್ ಎಂದು ಇಟ್ಟುಕೊಂಡಿರುತ್ತೇವೆ. ಮುಂದೆ ಪಾಸ್ ಪೋರ್ಟ್ಗೋ ವಿಸಾಕ್ಕೋ ಅದರ ವಿವರಣೆ ಕೊಡುವುದೇ ನಮಗೆ ಕಷ್ಟ ಎನ್ನುವುದಾದರೆ ಅದು ನಮ್ಮ ಬೌದ್ದಿಕ ದಿವಾಳಿತನ ಅಲ್ಲ, ಅತಿ ಬೌದ್ದಿಕತೆಯ ದುರಂತ.