ಮೇ 19 ರ ಭಾನುವಾರ. ಹೊಸಮನೆಯಲ್ಲಿದ್ದೆ. ಬೆಳಿಗ್ಗೆಯೇ ತಮ್ಮ ಉಮೇಶನಿಗೆ ಪಕ್ಕದ ಮನೆಯ (ಪಕ್ಕ ಅಂದರೆ ಅರ್ಧ ಕಿಲೋಮೀಟರ್ ದೂರ) ಶ್ರೀಪಾದನ ಫೋನು. '' ನಿಮ್ಮ ಎಮ್ಮೆ ಸಣ್ಣ ಉಬ್ಬಿನ ಹತ್ರ ಕೆರೆಯ ಕೆಸರಿನಲ್ಲಿ ಹೂತು ಹೋಗಿದೆ.''
ಶುಕ್ರವಾರ ಒಂದು ಎಮ್ಮೆ ಮನೆಗೆ ಬಂದಿರಲಿಲ್ಲ. ಶನಿವಾರ ಅಮ್ಮನ ಮಾಸಿಕ. ಆ ಗಡಿಬಿಡಿಯಲ್ಲಿ ಹುಡುಕಲು ಹೋಗಲಿಲ್ಲ. ಬಿರುಬೇಸಿಗೆಯ ದಿನಗಳು. ಮಲೆನಾಡಿಲ್ಲೂ ಮಳೆ ಇಲ್ಲ. ಮನೆಯಿಂದ ಹೊರಟ ಎಮ್ಮೆ ಅಲ್ಲಿ ಇಲ್ಲಿ ಮೇಯ್ದು ಬಾಯಾರಿ ಕೆರೆಯ ನೀರು ಕುಡಿಯಲು ಹೋಗಿದೆ. ಬತ್ತಿ ಹೋದ ಕೆರೆಯ ಮಣ್ಣಲ್ಲಿ ಹೂತು ಮೇಲೆ ಬರಲಾಗದೇ ಮಲಗಿದೆ.
ಶ್ರೀಪಾದನ ಮನೆಯ ಒಂದು ಎಮ್ಮೆಯೂ ಮನೆಗೆ ಬಂದಿರಲಿಲ್ಲ. ಆತ ಅದನ್ನು ಹುಡುಕಿಕೊಂಡು ಹೋದವನು. ಕಂಡಿದ್ದು ನಮ್ಮ ಎಮ್ಮೆಯನ್ನು. ವಾಸ್ಕೋಡಗಾಮನೋ ಯಾರೋ, ಇಂಡಿಯಾವನ್ನು ಹುಡುಕಿಕೊಂಡು ಹೋಗಿ ವೆಸ್ಟ್ ಇಂಡೀಸ್ ಸಿಕ್ಕಿತಂತಲ್ಲ ಹಾಗೆ. ಅವನ ಮನೆ ಎಮ್ಮೆಯ ಬದಲು ನಮ್ಮ ಎಮ್ಮೆ ಕಂಡಿದೆ.
ಉಮೇಶ ಬೈಕನ್ನೇರಿ ರವಿಯ ಜೊತೆ ಹೋದ. ಹುಡುಗರು - ಉಜ್ವಲ, ರಾಜು, ಸುದರ್ಶನ, ಉತ್ತಮ - ತಾವೂ ಬರುತ್ತೇನೆಂದರು. ಅವರ ಜೊತೆ ನಾನೂ ಸುರೇಶ ಹೋದೆವು. ನಾವು ಹೋಗುವುದರಲ್ಲಿ ಆಪರೇಷನ್ ಎಮ್ಮೆ ಶುರುವಾಗಿತ್ತು. ಹಿಂಬದಿಯ ಕಾಲುಗಳ ಪಕ್ಕ ಹಗ್ಗ ಹಾಕಿ ರವಿ ಎಳೆಯುತ್ತಿದ್ದ. ಉಮೇಶ, ಶ್ರೀಪಾದ ಕೋಡು ಹಿಡಿದು ಎಳೆಯುತ್ತಿದ್ದರು. ನಾನು , ಸುರೇಶ ರವಿಗೆ ಸಹಾಯ ಮಾಡಿದೆವು. ಎಮ್ಮೆ ಸ್ವಲ್ಪ ಸ್ವಲ್ಪವೇ ಮೇಲೆ ಬರಲಾರಂಭಿಸಿತು.
ನಾನು ಮೊಬೈಲ್ ತಂದಿರಲಿಲ್ಲ. ರಾಜುಗೆ ಫೋಟೋ ತೆಗೆಯಲು ಹೇಳಿದೆ. (ಅವನು ಹಳೇ ರಾಜಕುಮಾರ್ ಸಿನಿಮಾದ ಥರ 20 ರೀಲ್ ಸುತ್ತಿದ)
ಎಮ್ಮೆ ಕೆಸರಿಂದ ಮೇಲೆ ಬಂದಿತಾದರೂ ನಿಲ್ಲಲು ಶಕ್ತಿ ಇರಲಿಲ್ಲ. ನಾನು ಉತ್ತಮ ಮನೆಗೆ ಹೋಗಿ ಹಿಂಡಿ, ಬಿಸಿನೀರು, ಒಂದು ಕಟ್ಟು ಹುಲ್ಲು ತಂದೆವು. ನಾವು ಬರುವಷ್ಟರಲ್ಲಿ ಎಮ್ಮೆ ಕೆರೆಯಂಗಳದಿಂದ ಬಹಳ ಮೇಲೆ ಬಂದು ನಿಂತಿತ್ತು. ಮೆತ್ತಗಿನ ಕೆಸರಾದ್ದರಿಂದ ಮೈ ಮೇಲೆ ಗಾಯಗಳಾಗಿರಲಿಲ್ಲ. ಮೂಳೆಗೂ ಏಟಾಗಿರಲಿಲ್ಲ. ವಾಟರ್ ಬೆಡ್ ಮೇಲೆ ಮಲಗಿದ ಹಾಗಿರಬೇಕು. ಕಾಲುಗಳು ಅಲ್ಲಾಡಿಸದೇ ಎರಡು ದಿನ ಇದ್ದದ್ದರಿಂದ ಚೋಮು ಹಿಡಿದಿರಬಹುದು. ನಾವು ತಂದ ಬಿಸಿನೀರಿಂದ ರವಿ ಮೈ ತೊಳೆದ. ಹಿಂಡಿ, ಹುಲ್ಲು ತಿನ್ನಲು ಕೊಟ್ಟ ಸ್ವಲ್ಪ ಹೊತ್ತಿನ ಮೇಲೆ ಎಮ್ಮೆ ಚೇತರಿಸಿಕೊಂಡಿತು.
ಮಲೆನಾಡಿನಲ್ಲಿ ಇಂಥ ಘಟನೆಗಳು ನಡೆಯುತ್ತಲೇ ಇರುತ್ತವೆ. ಕಳೆದು ಹೋದ ಎಮ್ಮೆಯನ್ನೋ, ದನವನ್ನೋ ಹುಡುಕಿಕೊಂಡು ಕಾಡು ಮೇಡು ಅಲೆಯುವುದು. ಸಿಗದಿದ್ದಾಗ ನಿಮಿತ್ಯ ಕೇಳುವುದು, ಪ್ರಶ್ನೆ ಕೇಳುವುದು ಸಾಮಾನ್ಯ. ಇಂಥ ಚಿಕ್ಕ ಚಿಕ್ಕ ಘಟನೆಗಳಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆ ಮುಖ್ಯ. ಇವೇ ಮಕ್ಕಳ ಭಾವ ಜಗತ್ತನ್ನು ಸಮೃದ್ಧಗೊಳಿಸುತ್ತವೆ. ಒಬ್ಬ ವ್ಯಕ್ತಿ ಸುತ್ತಮುತ್ತಲಿನ ಜನ, ಜಾನುವಾರು, ಪ್ರಕೃತಿ, ಸಂಸ್ಕೃತಿಗೆ ಹತ್ತಿರವಾಗುವುದು ಹೀಗೆ. ಅಲ್ಲಿ ನಮ್ಮ ಮಕ್ಕಳು ಏನೇನನ್ನು ತಮ್ಮ ಭಾವ ಜಗತ್ತಿನಲ್ಲಿ ತುಂಬಿಕೊಂಡರೋ ಅದನ್ನು ಹತ್ತು ಬೇಸಿಗೆ ಶಿಬಿರಗಳೂ ತುಂಬಲಾರವು. ಜೊತೆಗೆ ತೇಜಸ್ವಿಯಂಥವರನ್ನು ಓದಲು ಪ್ರಾರಂಭಿಸಿದರೆ ಅನುಭವದ ಜಗತ್ತು ಓದಿನೊಂದಿಗೆ ಸೇರುತ್ತಾ, ಓದಿದ್ದು ಅನುಭವದ ಬೆಳಕಲ್ಲಿ ಕಾಣುತ್ತಾ ಹೊಸದೊಂದು ಪ್ರಪಂಚವೇ ತೆರೆಯುತ್ತದೆ. ಇದು ವ್ಯಕ್ತಿಯ ಸಾಂಸ್ಕೃತಿಕ ಶ್ರೀಮಂತಿಕೆಗೆ ಕಾರಣವಾಗುತ್ತದೆ.
ಇಷ್ಟಾದರೂ ರಾಜು ತೆಗೆದ ವೀಡಿಯೋ ದೃಶ್ಯಗಳು ನನ್ನ ಫೋನ್ ಗೆ ಟ್ರಾನ್ಸ್ ಫರ್ ಆಗಲೇ ಇಲ್ಲ ಇವು ನಾನು ತೆಗೆದ '' ಆಪರೇಷನ್ ಎಮ್ಮೆ '' ಯ ಉತ್ತರಾರ್ಧದ ಫೋಟೋಗಳು..




ಬರೆಯಲು ಮರೆತಿದ್ದ ಏನೆಂದರೆ ರಂಗನಿಗೆ ಪರೀಕ್ಷೆ ಇದ್ದುದರಿಂದ ಅವನು ಬಂದಿರಲಿಲ್ಲ. ಆತ ಬಂದಿದ್ದರೆ ಆತನ ಪಾರ್ಟಿಸಿಪೇಷನ್ ಇರುತ್ತಿತ್ತು..
ReplyDelete