Saturday, 14 December 2013

ಕನಸು ಮುರುಟದಿರಲಿ

ಅರವಿಂದ ಕೇಜ್ರೀವಾಲ್ ಗೆ ಆದರ್ಶದ ಕ್ರೇಜ್ ಇರುವಂತಿದೆ. ಇರಲಿ, ಆದರ್ಶದ ಬಗೆಗಿನ ಅವರ ಅತೀವ ಕಾಳಜಿಯೇ ಅವರನ್ನು ಹೋರಾಟದ ಹಾದಿಯಿಂದ ಅಧಿಕಾರದ ಹೆಬ್ಬಾಗಿಲವರೆಗೆ ತಂದು ನಿಲ್ಲಿಸಿದೆ. ಅದಕ್ಕಾಗಿ ಅವರು ಸಾಕಷ್ಟು ಬೆವರು ಹರಿಸಿದ್ದಾರೆ. ಅಣ್ಣಾ ಹಜಾರೆ ಜೊತೆಗೂಡಿ ವ್ಯವಸ್ಥೆಯನ್ನು ಶುದ್ಧೀಕರಿಸಲು ಹೋರಾಟ ಆರಂಭಿಸಿದ ಕೇಜ್ರೀವಾಲ್ ''ಅಲ್ಲಿ ಹಾರಾಡುವುದಲ್ಲ ; ಇಲ್ಲಿ ಬಂದು ಹೋರಾಡಿ ಗೆಲ್ಲಿ ನೋಡೋಣ '' ಎಂಬ ಸೋಕಾಲ್ಡ್ ರಾಜಕಾರಣಿಗಳ ಆಹ್ವಾನವನ್ನು ಸ್ವೀಕರಿಸಿ ಈ ಹಂತಕ್ಕೆ ಬಂದಿದ್ದಾರೆ. ಅಭಿನಂದನಾರ್ಹರು. ಕರ್ನಾಟಕವೂ ಸೇರಿದಂತೆ ದೇಶದ ಅನೇಕ ಕಡೆಗಳಿಂದ ಅವರ ಹೋರಾಟಕ್ಕೆ ಬೆಂಬಲ ನೀಡಿ ದೆಹಲಿಗೆ ಹೋಗಿ ಮನೆ ಮನೆ ಪ್ರಚಾರ ಮಾಡಿ, ಗೆಲುವಲ್ಲಿ ದುಡಿದ ಕಾರ್ಯಕರ್ತರಿದ್ದಾರೆ. ಅವರೆಲ್ಲರ ಈ ಗೆಲುವು " ಯಾವುದೇ ಬದಲಾವಣೆ ಸಾಧ್ಯವಿಲ್ಲ. " ಅಂದುಕೊಂಡು ಹತಾಶರಾಗಿದ್ದ ಹಲವು ಸಜ್ಜನರಿಗೆ ಕಾರ್ಗತ್ತಲ ರಾತ್ರಿಯ ಆಶಾಕಿರಣವಾಗಿ ಕಾಣುತ್ತಿದೆ.
    ಇದುವರೆಗೆ ಆಮ್ ಆದ್ಮಿ ಗುಂಪು ಹೋರಾಟಗಾರರಾಗಿದ್ದರು. ಆದರೀಗ ಅವರು  ರಾಜಕಾರಣಿಗಳು. ಈಗ ರಾಜಕಾರಣವನ್ನೇ ವಿರೋಧಿಸುವಂತಿಲ್ಲ. ಅದರಲ್ಲಿನ ಕೊಳಕನ್ನು ಮಾತ್ರ ವಿರೋಧಿಸಬಹುದು. ಕೇಂದ್ರದಲ್ಲಿ ಏಕ ಪಕ್ಷದ ಆಡಳಿತದ ಯುಗ ಅಂತ್ಯವಾಗಿ ಸಮ್ಮಿಶ್ರ ಸರ್ಕಾರದ ಪರ್ವ ಆರಂಭವಾಗಿ ಹಲವು ಕಾಲ ಕಳೆದಿದೆ. ಅದರ ಸಾಧಕ ಬಾಧಕಗಳನ್ನು ದೇಶ ಅನುಭವಿಸಿದೆ. ಅದನ್ನು ಹಲವು ಪ್ರಾದೇಶಿಕ ಪಕ್ಷಗಳು ದುರುಪಯೋಗಪಡಿಸಿಕೊಂಡವು ಎಂಬುದು ಬೇರೆ ಮಾತು. ಹಾಗೆಯೇ ಮುಖ್ಯ ಪಕ್ಷಗಳು ಪ್ರಾದೇಶಿಕ ಪಕ್ಷಗಳ ಬೆಂಬಲ ಪಡೆಯಲು ಕೆಲವು ಅಸಂವಿಧಾನಿಕ ಹಾದಿ ಹಿಡಿದದ್ದೂ ಉಂಟು. ಆದರೆ ಸಮ್ಮಿಶ್ರ ರಾಜಕಾರಣ ಈಗ  ವಾಸ್ತವದ ರಾಜಕಾರಣ. ಹಾಗೆಯೇ ದೆಹಲಿಯಲ್ಲಿ ಆಮ್ ಆದ್ಮಿ ಬೇರೆ ಪಕ್ಷಗಳನ್ನು ಭ್ರಷ್ಟರು ಎಂದು ದೂರವಿಡಲು ನೋಡಿದರೂ ಜನ ಅವರನ್ನೂ ಆರಿಸಿದ್ದಾರೆ. ಹಾಗೆ ನೋಡಿದರೆ ಇವರಿಗಿಂತ ಹೆಚ್ಚೇ ಆರಿಸಿದ್ದಾರೆ. ಜನಾಭಿಪ್ರಾಯವನ್ನು ಗೌರವಿಸಲೇ ಬೇಕು.ಜನರು ಸಮ್ಮಿಶ್ರ ಸರ್ಕಾರಕ್ಕೆ ಆದೇಶಿಸಿದ್ದಾರೆಂದು ಅರ್ಥ ಮಾಡಿಕೊಳ್ಳಬೇಕೇ ಹೊರತು ಹಠ ಹಿಡಿದು ಮತ್ತೆ ಚುನಾವಣೆಗೆ ಒತ್ತಾಯಿಸುವುದಲ್ಲ.
    ಕಾಂಗ್ರೆಸ್ ಮತ್ತು ಬಿ.ಜೆ.ಪಿ.ಗಳು ಸರ್ಕಾರ ರಚಿಸಲು ಯಾಕೆ ಯೋಚಿಸುತ್ತಿಲ್ಲ ಎಂದರೆ ಅವರಿಗೆ ನೈತಿಕತೆಯ ಭಯವಲ್ಲ. ಅವರಿಗೆ ಗೊತ್ತಿರುವ " ತಂತ್ರ" ಗಳನ್ನು ಉಪಯೊಗಿಸಿದರೆ ಆಗುವ ಪರಿಣಾಮದ ಭಯ. ಕರ್ನಾಟಕದಲ್ಲಿ ಅದರ ರುಚಿ ಆ ಪಕ್ಷಗಳಿಗಾಗಿದೆ. ಅಂಥದ್ದರಲ್ಲಿ ಯಾವುದೋ ಪಕ್ಷ ಆಮ್ ಆದ್ಮಿಗೆ ಸರ್ಕಾರ ರಚಿಸಲು ಸಹಕರಿಸುತ್ತೇನೆಂದರೆ ಅದರ ಸಾಧಕಗಳ ಬಗೆಗೆ ಯೋಚಿಸುವುದು ಒಳ್ಳೆಯದು-ಕಾರ್ಯಸಾಧುವಾದ ಷರತ್ತುಗಳೊಂದಿಗೆ.
    ಯಾಕೆಂದರೆ ಆಮ್ ಆದ್ಮಿಗೆ ಅಧಿಕಾರದ ಆಸೆ ಇಲ್ಲದಿರುವುದರಿಂದ ಅವರನ್ನು ಬೆಂಬಲ ಹಿಂಪಡೆಯುವ ಬ್ಲಾಕ್ ಮೇಲ್ ಮಾಡಲಾಗುವುದಿಲ್ಲ. ಬೇಷರತ್ತಾಗಿ ಬೆಂಬಲ ನೀಡಿದರೆ ಯೋಚಿಸುವುದು ಒಳ್ಳೆಯದು. ಅದರಿಂದ ಮೊದಲನೆಯದಾಗಿ, ಅದು ಸರ್ಕಾರ ರಚಿಸಿ ಅದರ ಮೂಲಕ ವ್ಯವಸ್ಥೆಯ ಶುದ್ಧೀಕರಣದ ಕ್ರಿಯೆಯನ್ನು ಆರಂಭಿಸಲು ಅನುಕೂಲವಾಗುತ್ತದೆ. ಎರಡನೆಯದಾಗಿ ಆಮ್ ಆದ್ಮಿ ಪಕ್ಷಕ್ಕೆ ಈ ಸಲ ಇಷ್ಟು ಸೀಟು ಗೆಲ್ಲಲು ಸಾಧ್ಯವಾಗಿರುವುದಕ್ಕೆ ಬಹುಷಃ ಬೇರೆ ಪ್ರಬಲ ರಾಜಕೀಯ ಪಕ್ಷಗಳು ಆಮ್ ಆದ್ಮಿಯನ್ನು ಇವರೇನು ಮಾಡಿಯಾರು ಎಂದು  ಹಗುರವಾಗಿ ಪರಿಗಣಿಸಿದ್ದೂ ಕಾರಣ. ಆದರೆ ಈಗ ಪಟ್ಟ ಭದ್ರ ಪಕ್ಷಗಳಿಗೆ ಆಮ್ ಆದ್ಮಿಯ ಭಯ ಶುರುವಾಗಿದೆ. ಇನ್ನೊಮ್ಮೆ ಚುನಾವಣೆಯಾದರೆ ಅವು ತಮ್ಮ ದೀರ್ಘಕಾಲಿನ ಹಿತರಕ್ಷಣೆಗಾಗಿ ಆಮ್ ಆದ್ಮಿಯನ್ನು ಬಲಿಹಾಕಲು ಎಂಥ ದಾರಿಯನ್ನೂ ಹಿಡಿಯಬಹುದು ; ಅವು ಪರಸ್ಪರ ಸಹಕರಿಸಲೂಬಹುದು. ಆಗ ದೇಶದ ಜನತೆಯ ಮನಸ್ಸಿನಲ್ಲಿ ಈಗ ತಾನೇ ಚಿಗುರುತ್ತಿರುವ ಕನಸು ಮುರುಟಿಹೋಗುವ ಸಾದ್ಯತೆಗಳಿರುತ್ತದೆ.

No comments:

Post a Comment