Monday, 11 January 2016
Friday, 8 January 2016
ಹೊಸ ದೃಷ್ಟಿ.
ಪಾಕೀಸ್ತಾನದ ವಿಷಯದಲ್ಲಿ ಭಾರತ ತನ್ನ ಕಾರ್ಯತಂತ್ರವನ್ನು ಬದಲಾಯಿಸಿಕೊಳ್ಳಬೇಕಾಗಬಹುದು.
ನವಾಜ್ ಷರೀಪರು ಭಾರತದ ಜೊತೆಗಿನ ಸಂಬಂಧದ ಸುಧಾರಣೆಯ ಪರವಾಗಿದ್ದಾರೆ ಎಂದು ನಾವು
ನಂಬುವುದಾದರೆ, ನಾವು ಅದನ್ನು ಪರಿಗಣಿಸಬೇಕು ಮತ್ತು ಸೇನೆ ಹಾಗೂ ಐಎಸ್‌ಐ ಷರಫರಿಗೆ
ಅಡ್ಡಗಾಲು ಹಾಕುತ್ತಿದ್ದಾರೆ ಎಂದು ನಾವು ಅಂದುಕೊಂಡಿದ್ದರೆ, ಅವೆರಡನ್ನೂ ಕಡೆಗಣಿಸಿ
ನಾವು ಷರೀಫರೊಂದಿಗೆ ಮಾತುಕತೆ ಮುಂದುವರೆಸಲು ಅನುವಾಗಬೇಕು. ಪಠಾಣ್ ಕೋಟ್ ಮೇಲಿನ ಧಾಳಿಯು
ಮೋದಿ ಪಾಕೀಸ್ತಾನಕ್ಕೆ ದಿಢೀರನೆ ಭೇಟಿ ನೀಡಿ, ಷರೀಫ್ ರ ಕೈ ಕುಲುಕಿ ಶಾಂತಿ ಮಾತುಕತೆ
ಮುಂದುವರಿಕೆಗೆ ತೋರಿದ ಉತ್ಸಾಹಕ್ಕೆ ತಣ್ಣೀರೆರೆಚುವುದಕ್ಕೆ ಸೇನೆ ಹಾಗೂ ಐಎಸ್‌ಐ ಮಾಡಿದ
ಕುತಂತ್ರ ಎನ್ನುವುದಾದರೆ, ನಾವು ಆ ಕುತಂತ್ರಕ್ಕೆ ಪ್ರತಿ ತಂತ್ರ ಹೂಡುವುದು ಒಳ್ಳೆಯದು.
ಪಾಕೀಸ್ತಾನದೊಳಗೆ ಸೇನೆ ಮತ್ತು ಐಎಸ್‌ಐ ಗಳನ್ನು ಹದ್ದುಬಸ್ತಿನಲ್ಲಿಡುವುದು ಷರೀಫರಿಗೆ
ಬಿಟ್ಟ ವಿಷಯ. ನಾವು ಅವರಿಗೆ ಪ್ರೋತ್ಸಾಹ ನೀಡಬೇಕು. ಭಾರತ ಮತ್ತು ಪಾಕ್ ಎರಡೂ ಕಡೆ ಉಭಯ
ದೇಶಗಳ ಸಂಬಂಧವನ್ನು ಸುಮಧುರಗೊಳಿಸುವುದಕ್ಕೆ ಜನರ ಒಲವಿದೆ ತಾನೇ ? ಹಾಗಾದರೆ ನಾವಿನ್ನೂ
ಹಳೆಯ ಕಗ್ಗಂಟುಗಳ ನಡುವೆ ಸಿಲುಕಿ ಅಲ್ಲಲ್ಲೇ ಒದ್ದಾಡುವುದನ್ನು ಬಿಡಬೇಕು. ಕಡೆಗೂ ವಿರೋಧ
ಪಕ್ಷಗಳು (ವಿರೋಧಿಸುವುದಕ್ಕಾಗಿಯೇ ಇರುವ ಪಕ್ಷಗಳು) ಒಂದಷ್ಟು ಹುಯಿಲೆಬ್ಬಿಸಬಹುದು.
ಆದರೂ, ಸಧ್ಯ ಭಾರತದಲ್ಲಿ ಮೋದಿಗಿರುವ ಜನಪ್ರಿಯತೆ ಮತ್ತು ಸಂಖ್ಯಾ ಬಲ ಅಂಥ ವಿರೋಧವನ್ನು
ಮೆಟ್ಟಿ ನಿಲ್ಲುವ ಶಕ್ತಿ ಕೊಡುತ್ತದೆ. ಅಂತಿಮವಾಗಿ ಅದು ಸಕಾರಾತ್ಮಕ ಪರಿಣಾಮ ಬೀರಬಹುದು
ಎಂದು ನಾವು ನಂಬಬೇಕು. ಎರಡೂ ಕಡೆ ಒಮ್ಮೆ ಸಂಬಂಧ ಸುಧಾರಣೆಯ ವಿರೋದಿಗಳನ್ನು, ಮತ್ತೊಮ್ಮೆ ಪರವಾಗಿರುವವರನ್ನು
ಮಗದೊಮ್ಮೆ ಅಂತರರಾಷ್ಟ್ರಿಯ ಹಿತಾಸಕ್ತಿಗಳನ್ನು ಓಲೈಸುವ ನಾಟಕ ಆಡುತ್ತಾ ಕಾಲ ಕಳೆಯುವ ಬದಲು ಹೀಗೊಮ್ಮೆ ಪ್ರಯತ್ನಿಸುವುದು ಒಳ್ಳೆಯದಲ್ಲವೇ
?
Saturday, 17 October 2015
Thursday, 8 October 2015
ಯಾವ ಸಂದೇಶ
ಮೋದಿ ಈಗ ಭಾರತದ ನಂ. ಒನ್ ಸೆಲೆಬ್ರಿಟಿ. ಒಂದು ರೀತಿಯಲ್ಲಿ ಭಾರತದ ಪ್ರಚಾರ ರಾಯಭಾರಿ. ಅವರು ಮಾಡಿದ್ದೆಲ್ಲ ಅದ್ಧೂರಿ ಹಾಗೂ ಸುದ್ದಿ. ಅವರನ್ನು ಅವರಷ್ಟೆ ಅಥವಾ ಅವರಿಗಿಂತ ಹೆಚ್ಚು ಸಮರ್ಥಿಸಿಕೊಳ್ಳಬಲ್ಲ ಒಂದು ದೊಡ್ಡ ಪಡೆಯೇ ದೇಶದಾದ್ಯಂತ ಇದೆ. ಅದು ವೃತ್ತಿ ಪರ ರಾಜಕೀಯ ವಲಯದಿಂದ ಹೊರತು ಪಡಿಸಿದ್ದು. ಅವರೀಗ ಅವರ ಸರ್ಕಾರದ ಏಕೈಕ ಶಕ್ತಿ ಕೇಂದ್ರ ಅಂದುಕೊಳ್ಳಲಾಗಿತ್ತು. ಆದರೆ ಈಗ ನೋಡಿ ಅವರು ದೇಶವಾಸಿಗಳಿಗೆ ರಾಷ್ಟ್ರಪತಿ ಪ್ರಣವಮುಖರ್ಜಿಯವರ (ಕೋಮು ಸೌಹಾರ್ದ ಕುರಿತಂತೆ) ಮಾತುಗಳನ್ನು ಪಾಲಿಸುವಂತೆ ಕರೆ ನೀಡುತ್ತಾರೆ. ಅವರು ಮುಂದುವರಿದು ಸಣ್ಣ ಪುಟ್ಟ ರಾಜಕಾರಣಿಗಳ ಬೇಜವಾಬ್ದಾರಿ ಮಾತುಗಳಿಗೆ ಕಿವಿಗೊಡಬೇಡಿ ಎನ್ನುತ್ತಾರೆ. ಅಂದರೆ, ಮೋದೀಜಿ ಈಗ ಅದೇ ಅವರ ಪಕ್ಷದ ಬೇಜವಾಬ್ದಾರಿ ಮಾತುಗಳನ್ನು ಆಡುವವರನ್ನು ಹದ್ದು ಬಸ್ತಿನಲ್ಲಿಡುವ ಶಕ್ತಿ ಹೊಂದಿಲ್ಲ ಎಂದರ್ಥವೇ ? ಅಥವಾ ಅಂಥ ಮಾತುಗಳನ್ನಾಡಲು ಬೇರೆ ಕಡೆಯಿಂದ ಸೂಚನೆಗಳು ಸಿಗುತ್ತಿವೆಯೇ ? ಮತ್ತು ಅಂಥ ಮೂಲಗಳು ಮೋದೀಜೀಗಿಂತ ಬಲವುಳ್ಳವೇ ? ಅಥವಾ ಒಂದು ಕಡೆ ತಾನು ಕೋಮು ಸೌಹಾರ್ದಕ್ಕೆ ಬದ್ದ ಎಂದು ತೋರಿಕೊಳ್ಳುತ್ತಾ ಅಂಥ ದೇಶವಾಸಿಗಳ ಮನ ಗೆಲ್ಲುತ್ತಾ, ಇನ್ನೊಂದು ಕಡೆ ತಮ್ಮ ಪಡೆಗಳ ಮೂಲಕ ತಮ್ಮ ಪಕ್ಷದ ನಿಷ್ಠಾವಂತರ ಭಾವನೆಗಳನ್ನು ಪೋಷಿಸಿಕೊಂಡು ಬರಲಾಗುತ್ತಿದೆಯೇ ?
ಮೋದೀಜಿಯ ಇನ್ನೊಂದು ಮಾತು : ರಾಷ್ಟ್ರಪತಿಯವರ ಸಂದೇಶಕ್ಕಿಂತ ದೊಡ್ಡ ಸಂದೇಶ, ದೊಡ್ಡ ಮಾರ್ಗಸೂಚಿ, ದೊಡ್ಡ ದಿಕ್ಸೂಚಿ ಬೇರೊಂದಿಲ್ಲ. ಈ ದಿಕ್ಕಿನಲ್ಲಿಯೇ ನಡೆದರೆ ವಿಶ್ವದ ನಿರೀಕ್ಷೆಗಳನ್ನು ಭಾರತ ಈಡೇರಿಸಬಲ್ಲದು. ಅಂದರೆ ಮೋದಿಯವರ ಗಮನ ಸಂಪೂರ್ಣವಾಗಿ ವಿಶ್ವದ ನಿರೀಕ್ಷೆಗಳನ್ನು ಈಡೇರಿಸುವುದರಲ್ಲಿಯೇ ಹೊರತು ಭಾರತ ದೇಶವಾಸಿಗಳದ್ದನ್ನಲ್ಲ.
Wednesday, 2 September 2015
ಕೇರಳಾ.......
ಕಳೆದ ೧೫ ಮತ್ತು ೧೬ ರಂದು ಎರಡು ದಿನ ಕೊಡಗಿನ ಗಡಿಯ ಕೇರಳದಲ್ಲಿ ಸುತ್ತಾಡುವ ಅವಕಾಶವೊದಗಿ ಬಂದಿತ್ತು. ವೀರಾಜಪೇಟಿಯಿಂದ ಘಾಟಿ ಇಳಿದರೆ ಇರಿಟ್ಟಿ ಎಂಬ ಊರು. ಅಲ್ಲಿಂದ ಸುಮಾರು ಮೂವತ್ತು ಕಿ.ಮೀ. ದೂರದ ಕರುವಂಚಾಲು ಕಡೆಗೆ ನಮ್ಮ ಪಯಣ. ಅಲ್ಲಿ ತೋಟದ ಮಧ್ಯದ ಮನೆಯೊಂದರಲ್ಲಿ ಅವತ್ತು ಉಳಿದುಕೊಳ್ಳುವ ಅವಕಾಶ. ಕೇರಳ ದೇವರ ಸ್ವಂತ ನಾಡು ಎಂಬ ಹೆಸರಿದೆ- ಅಲ್ಲಿಯ ಸುಂದರ ಪ್ರಕೃತಿಯಿಂದ. ನಮಗೂ ಎರಡು ದಿನ ಅಲ್ಲಿಯ ಸುಂದರ ಪರಿಸರದ ದರ್ಶನವಾಯಿತು. ಅದರಲ್ಲೂ ಆ ತೋಟದ ಮನೆಯಲ್ಲಿ ಸಂಜೆ ಐದು ಗಂಟೆಯಿಂದ ಮರುದಿನ ಬೆಳಿಗ್ಗೆ ಒಂಬತ್ತು ಗಂಟೆಯವರೆಗೂ ಧೋ... ಎಂದು ಸುರಿವ ಮಳೆಯನ್ನು ನೋಡುತ್ತಾ, ಭೋರ್ಗರೆತವನ್ನು ಕೇಳುತ್ತಾ (ಒಂದು ಲೋಟ ಬಿಸಿ ಬಿಸಿ ಕಾಫಿಯೂ ಇಲ್ಲದೇ) ಕಳೆದದ್ದು ಮರೆಯಲಾಗದ ಅನುಭವ. ಅಲ್ಲಿ ನಾನು ತೆಗೆದ ಕೆಲವು ಚಿತ್ರಗಳು ಇಲ್ಲಿವೆ. ಇವು ನಾನು ಪಡೆದ ಅನುಭವದ ಲವಲೇಷವನ್ನೂ ನಿಮಗೆ ತಲುಪಿಸಲಾರವು ಎಂದು ನನಗೆ ಗೊತ್ತಿದೆ. ಆದರೂ, ಇದು ನನಗಾದ ಅಪೂರ್ವ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾತ್ರ. ಅಲ್ಲೆಲ್ಲ ಓಡಾಡುತ್ತ, ನನಗೆ ಮತ್ತೆ ಮತ್ತೆ ನೆನಪಾದದ್ದು ಮೈಸೂರಿನ ಕವಿ ಕೆ. ನ. ಶಿವತೀರ್ಥನ್ ಅವರ ಈ ಸಾಲುಗಳು :
ಕೇರಳಾ ಕೇರಳಾ
ಏನಲ್ಲಿ ಹೇರಳಾ
ನಾರೀ ಕೇಳಾ
.......
Friday, 17 July 2015
ಅಮ್ಮನ ನೆನಪು
ಮೈಸೂರಲ್ಲಿ ಬಸ್ಸು ಹತ್ತಿ ಕುಳಿತಿದ್ದೇನೆ ಮೂಡಬಿದರೆಯ ಕಡೆಗೆ. ಪಕ್ಕದಲ್ಲಿದ್ದ ಮಡದಿಯ ಜೊತೆ ಮಾತಾಡುತ್ತ ನೆನಪುಗಳು ಸುರುಳಿ ಬಿಚ್ಚಿಕೊಳ್ಳುತ್ತವೆ. ನಾವು ಹಿಂದಿನ ಬಾರಿ ಮೂಡಬಿದರೆಯ ತಮ್ಮನ ಮನೆಗೆ ಹೋಗಿದ್ದು ಅವನ ಮಗನ ಉಪನಯನದ ಸಂದರ್ಭದಲ್ಲಿ-ಸುಮಾರು ಎರಡೂವರೆ ವರ್ಷಗಳ ಕೆಳಗೆ. ಆಗ ನನ್ನ ಅಪ್ಪ-ಅಮ್ಮ ಇಬ್ಬರೂ ಬದುಕಿದ್ದರು. ನಾವು ಉಪನಯನದ ಎರಡು ದಿನ ಮೊದಲೇ ಅಲ್ಲಿಗೆ ಹೋದೆವು. ಅಲ್ಲಿಗೆ ಬರುವವರಿದ್ದ ಅಪ್ಪ-ಅಮ್ಮ ಅವರೊಟ್ಟಿಗೆ, ನಾನು ನನ್ನ ಮಗ ಹೆಂಡತಿಯ ಜೊತೆ ಎರಡು ದಿನ ಕಾಲ ಕಳೆಯುವ ಆಸೆ ನನ್ನದು. ಮುಂದೆ ಎಂಥ ದಿನಗಳು ಬರುತ್ತವೋ ಏನೋ ಎಂದುಕೊಂಡೇ ಆ ಯೋಚನೆ ಮಾಡಿದ್ದೆ. ಇರುವ ದಿನಗಳನ್ನು ಚೆನ್ನಾಗಿ ಅನುಭವಿಸಿಬಿಡಬೇಕು ಎನ್ನುವವ ನಾನು. ಬದುಕು ಕ್ಷಣಿಕ ಎಂದು ಶಂಕರಾಚಾರ್ಯರು ಹೇಳಿದರೂ ಅಷ್ಟೆ, ಅಲ್ಬರ್ಟ್ ಕಮು ಹೇಳಿದರೂ ಅಷ್ಟೆ. ಆದರೆ ಶಂಕರಾಚಾರ್ಯರು ಈ ಬದುಕು ಕ್ಷಣಿಕ, ಇದನ್ನು ನೆಚ್ಚಿಕೊಳ್ಳಬೇಡ ಎಂದರೆ, ಆಲ್ಬರ್ಟ್ ಕಮು ಇದು ಕ್ಷಣಿಕ ಆದುದರಿಂದ ಇದನ್ನು ಅರ್ಥಪೂರ್ಣವಾಗಿ ಬದುಕು ಎನ್ನುತ್ತಾನೆ. ಲಂಕೇಶ್ ಇದನ್ನು ತಮ್ಮ ಲೇಖನಗಳಲ್ಲಿ ಹೆಚ್ಚು ಅರ್ಥವತ್ತಾಗಿ ವಿವರಿಸುತ್ತಿದ್ದರು. ನಾನು ಅವರಿಂದ ಕಲಿತೆ... ಇರಲಿ. ಮಾತು ಎತ್ತೆತ್ತಲೋ ಹೋಗುತ್ತಿದೆ.
ಅಮ್ಮನಿಗೆ ಸಂಬಂಧ ಪಟ್ಟ ಒಂದು ಘಟನೆ ನೆನಪಾಗುತ್ತಿದೆ. ಅಮ್ಮ ಕೆಲವು ಉಡುಗೊರೆಗಳನ್ನು ತಂದಿದ್ದಳು. ನನಗೆ ತೋರಿಸಿದಳು. "ಇದು ಸುರೇಶನಿಗೆ, ಇದು ಮಲ್ಲಿಕನಿಗೆ, ಇದು ಸುದರ್ಶನನಿಗೆ... " ಎಂದು ಇನ್ನೊಂದನ್ನು ತೋರಿಸಿ " ಇದನ್ನು ಚಿನ್ನಿಗೆ ಎಂದು ಇಟ್ಟಿದ್ದೇನೆ. ಈಗಲೇ ಕೊಟ್ಟು ಬಿಡುತ್ತೇನೆ. ಅವಳ ಮದುವೆಯ ಹೊತ್ತಿಗೆ ನಾನು ಇರುತ್ತೇನೋ ಇಲ್ಲವೋ " ಎಂದಳು. ನನಗೆ ಪಿತ್ತ ನೆತ್ತಿಗೇರಿತು. " ಅದೆಲ್ಲ ಯಾಕೀಗ ? ಕೊಡಬೇಕು ತಾನೇ. ಕೊಟ್ಟು ಬಿಡು " ಎಂದೆ. ನಾನು ಅವಳು ಜಗಳಾಡುವ ಶೈಲಿಯಲ್ಲಿ ಮಾತಾಡಿದ್ದೇ ಹೆಚ್ಚು. ಕೊಟ್ಟೂ ಬಿಟ್ಟಳು. ಅವಳ ಅನುಮಾನದ ಹಾಗೇ ಹೇಳದೇ ಕೇಳದೇ ಹೊರಟೂ ಹೋದಳು.......
Saturday, 11 April 2015
Subscribe to:
Posts (Atom)

































