Saturday, 31 December 2011

2011 ಜಾರಿ ಹೋಗುವ ಮುನ್ನ ಒಂದೆರಡು ಸಾಲು


ಬರೆಯಬೇಕೆನಿಸಿದ್ದನ್ನೆಲ್ಲಾ ಬರೆಯುವ ಹಾಗಿಲ್ಲ
ವೆಬ್ ಮೇಲೆ ಸಿಬಲ್ ಕಣ್ಣು ಉಂಟಲ್ಲ
ಆದರೂ.. ಥೇನ್ ಛಳಿಗೆ ನಡುಗಿ
ಸ್ವೆಟರ್ ತೊಟ್ಟ ಹುಡುಗಿ ಸುಂದರವಾಗಿ ಕಂಡದ್ದು ಸುಳ್ಳಲ್ಲವಲ್ಲ !
ಅಣ್ಣಾ ಗುಂಪು ಸಾಮಾಜಿಕ ಹೋರಾಟಗಾರರು ಎಂದುಕೊಂಡು ರಾಜಕೀಯ ಮಾಡುವುದು ಯಾಕೆ?
ರಾಜಕಾರಣಿಗಳು ಬರೀ ರಾಜಕೀಯ ಮಾಡಿ ಸಾಮಾಜಿಕ ಕಾಳಜಿ ಮರೆಯುವುದು ಯಾಕೆ ?
ಮಡೆ ಸ್ನಾನ ಮಾಡಿದರೆ ಕೆಲವರ ಗಲಾಟೆ
ಎಣ್ಣೆ ಸ್ನಾನ ಮಾಡಿ ಮಾಡಿದವರದೇ ಗಲಾಟೆ
ಅಧಿಕಾರ ಸಿಗದಿದ್ದರೆ ಸಿಗಲಿಲ್ಲ ಎಂದು ಸಮಾವೇಶ
ಸಿಕ್ಕರೆ ಬಿಡಲ್ಲ ಎಂದು ಸಮಾವೇಶ
ರೆಡ್ಡಿಗೆ ಜಾಮೀನು ಸಿಕ್ಕಿಲ್ಲ ; 
ಲೋಕಪಾಲ ಸದನದಲ್ಲಿ ಪಾಸಾಗಲಿಲ್ಲ.
ಸಂಕ್ರಾಂತಿಯ ನಂತರ ಯಡ್ಡಿ ಸುಮ್ಮನಿರಲ್ಲ
ರೇಣುಕಾಚಾರ್ಯ ಬಾಯಿ ಮುಚ್ಚಲ್ಲ.....
ಊರಲ್ಲಿ ತಮ್ಮನ ಗದ್ದೆ ಕೊಯ್ಲು ಆಗಿಲ್ಲ
"ಪಾರ್ಟಿ ಮಾಡೋಣ" ಎಂದಿದ್ದ ಗೆಳೆಯ ಬಂದಿಲ್ಲ
ಟಿಕ್...ಟಿಕ್.... ಹನ್ನೆರಡು ಹತ್ತಿರ ಬರುತ್ತಿದೆ..
ಖುಷಿಯೋ, ಬೇಜಾರೋ ಗೊತ್ತಾಗುತ್ತಿಲ್ಲ........

Wednesday, 28 December 2011

ಕನ್ನಡ‌


ಕನ್ನಡದ ವಿಷಯ ಮತ್ತೆ ಮತ್ತೆ ಚರ್ಚೆಯ ಮಂಚೂಣಿಗೆ ಬರುತ್ತಿದೆ. ಒಂದು ಕಡೆ ಕನ್ನಡದ ಸಾಹಿತಿಗಳಿಗೆ ಜ್ಞಾನ ಪೀಠ ಸಿಗುತ್ತಿದೆ. ಕನ್ನಡದ ಸಿನಿಮಾಗಳು ರಾಷ್ಟ್ರೀಯ, ಅಂತರ ರಾಷ್ಟೀಯ ಮಟ್ಟದಲ್ಲಿ ಪ್ರಶಸ್ತಿ ಗಳಿಸುತ್ತಿವೆ. ಕನ್ನಡ ಭಾಷಿಕರು ವಿದೇಶಿ ನೆಲದಲ್ಲಿ ಕನ್ನಡದ ಕಹಳೆ ಮೊಳಗಿಸುತ್ತಾರೆ. ಆದರೂ ಇವು ಯಾವುದೂ ಭಾಷೆಯ ಅವನತಿಯ ನಮ್ಮ ಗಾಬರಿಯನ್ನು ಕಡಿಮೆ ಮಾಡುತ್ತಿಲ್ಲ ಏಕೆ?
ಮುಖ್ಯವಾಗಿ ಚರ್ಚೆಯ ಸಂದರ್ಭಗಲ್ಲಿ ತಾತ್ವಿಕ ಸ್ಪಷ್ಟತೆ ಇಲ್ಲದೆ ಯಾರು ಏನು ಹೇಳುತ್ತಿದ್ದಾರೆ ಎಂದು ಗೊತ್ತಾಗದೆ ಗದ್ದಲವೇ ಕೇಳಿಸುತ್ತಿದೆ. ಹಾಗಾಗಿ ಇದು ಇಂಗ್ಲೀಷ್ ಬೇಕು ಬೇಡ ಎಂಬುದರ ಚರ್ಚೆಯೋ, ಕನ್ನಡ ಬೇಕು ಬೇಡ ಎಂಬುದರ ಚರ್ಚೆಯೋ ಆಗಿ ಬಿಡುತ್ತಿದೆ.ಭಾಷೆಯ ಚರ್ಚೆಯೋ, ಮಾದ್ಯಮದ ಚರ್ಚೆಯೋ ತಿಳಿಯುವುದಿಲ್ಲ. ಯಡಿಯೂರಪ್ಪನವರು ಮುಖ್ಯ ಮಂತ್ರಿಯಾಗಿದ್ದಾಗ ನಮ್ಮ ತಂಟೆಗೆ ಬಂದರೆ ನಿಮ್ಮ ಪುರಾಣವನ್ನು ಬಿಚ್ಚುತ್ತೇನೆ ಎಂದು ಕಡತ ತೋರಿಸಿ ಹೆದರಿಸಿದ ಹಾಗೆ ಕನ್ನಡ ಬೇಕು ಎಂದು ಹೇಳುವವರಿಗೆ ನಿಮ್ಮ ಮಕ್ಕಳು ಮೊಮ್ಮಕ್ಕಳು ಇಂಗ್ಲೀಷ್ನಲ್ಲಿ ಓದುತ್ತಿಲ್ಲವೇ ಎಂದು ಕೇಳುವಂತಾಗಿದೆ.ಇಂಗ್ಲೀಷ್ ಬೇಕು ಎಂದು ಹೇಳುವವರು ನಮ್ಮ ಮಕ್ಕಳಿಗೆ ಉದ್ಯೋಗ ಬೇಕು. ಹಾಗಾಗಿ ಇಂಗ್ಲೀಷ್ ಬೇಕು ಎನ್ನುತ್ತಿದ್ದಾರೆ. ಎರಡೂ  ವಾಸ್ತವ. ವಾಸ್ತವವಾಗಿ ಎರಡು ಭಾಷೆಗಳು ಬೇಕು.
ಇದಕ್ಕೆ ಸಂಬಂದಿಸಿದ ಹಾಗೆ ಅಂಕಣಕಾರ ರಾಮಚಂದ್ರ ಗುಹಾ ನವಂಬರ್ ೪ ರ ಪ್ರಜಾವಾಣಿಯಲ್ಲಿ ಬರೆದಿದ್ದಾರೆ. ( ನಾನು ಅದನ್ನು ಕಾರಣಾಂತರದಿಂದ ತಡವಾಗಿ ಓದಿದೆ) ಅದರಲ್ಲಿ ಅವರು ದ್ವಿಭಾಷಿಕತೆಯ ಬಗ್ಗೆ ಪ್ರಸ್ತಾಪಿಸಿತ್ತಾರೆ. ಬಾಲ್ಯವನ್ನು ವಿದೇಶದಲ್ಲಿ ಕಳೆಯಬೇಕಾಗಿ ಬಂದ ಗಾಂಧಿಯ ಮಕ್ಕಳಿಗೆ ಗಾಂಧಿಯ ಹಟದಿಂದಾಗಿ ಅವರ ಮಾತೃ ಭಾಷೆ ಹಾಗು ಅಲ್ಲಿನ ಪರಿಸರದಿಂದಾಗಿ ಇಂಗ್ಲೀಷ್ ಎರಡು ದಕ್ಕುತ್ತವೆ.
ಮುಖ್ಯವಾಗಿ ನಮ್ಮನ್ನಾಳುವ, ಶಿಕ್ಷಣ ನೀತಿ ರೂಪಿಸುವವರಿಗೆ ತಾತ್ವಿಕ ಸ್ಪಷ್ಟತೆಯೇ ಇಲ್ಲ. (ಅಥವಾ ತಾತ್ವಿಕತೆಯೇ ಇಲ್ಲ ಎಂದರು ಸರಿಯಾದೀತು) ಹಾಗಾಗಿ ಏಕ ಕಾಲಕ್ಕೆ ಎರಡು ತಪ್ಪುಗಳಾಗುತ್ತಿವೆ. ಗಾಂಧೀಜಿಯ ಮಕ್ಕಳಿಗೆ ಸಹಜವಾಗಿ ದಕ್ಕಿದ ದ್ವಿಭಾಷಿಕತೆ ನಮ್ಮಲ್ಲಿ ಯಾವ ವರ್ಗಕ್ಕೂ ಸಾಧ್ಯವಾಗುತ್ತಿಲ್ಲ. ಒಂದು ವರ್ಗದ ಜನ ಪ್ರಜ್ಞಾಪೂರ್ವಕವಾಗಿ ಇಂಗ್ಲಿಷನ್ನು ಕಲಿತು, ಕನ್ನಡ ಮರೆತು - ಅನಂತಮೂರ್ತಿಯವರ ಭಾಷೆಯಲ್ಲಿ ಹೇಳುವುದಾದರೆ - ಸಾಂಸ್ಕೃತಿಕ ಬೇರುಗಳಿಗೆ ಸಂಪೂರ್ಣವಾಗಿ ವಿಮುಖರಾಗುತ್ತಿದ್ದಾರೆ. ಇನ್ನೊಂದು ವರ್ಗದ ಜನ ಮುಚ್ಚುವ ಸ್ಥಿತಿಗೆ ಬಂದ ಸರ್ಕಾರಿ ಶಾಲೆಗಳಿಂದ , ಸರ್ಕಾರದ ತಪ್ಪು ನೀತಿಗಳಿಂದ ಅಥವಾ ದ್ವಂದ್ವ ನೀತಿಗಳಿಂದ ಶಿಕ್ಷಣದಿಂದಲೇ ವಂಚಿತರಾಗುತ್ತಿದ್ದಾರೆ. ಕನ್ನಡದ ಕೋಲು ಹಿಡಿದು ಸರ್ಕಾರವನ್ನು ಹೆದರಿಸುವವರು ಈ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಪಂಚಕ್ಕೆ ತೆರೆದುಕೊಳ್ಳಲು, ಉದ್ಯೋಗ ಗಿಟ್ಟಿಸಲು ಇಂಗ್ಲೀಷ್ ಬೇಕು ಎನ್ನುವ ಹಾಗು ನಮ್ಮತನ, ಸಂಸ್ಕೃತಿ ಉಳಿಸಿಕೊಳ್ಳಲು ಕನ್ನಡ ಬೇಕು ಎನ್ನುವ ಎರಡು ವಾದಗಳ ನಡುವೆ ವಾಸ್ತವ ಇದೆ.
ನಾನು ತಿಳಿದಂತೆ ನಮ್ಮ ಕನ್ನಡಿಗ ಮೇಲು ವರ್ಗದ ಮಂದಿಯಲ್ಲಿ ಇರುವಷ್ಟು ಮಾತೃ ಭಾಷೆಯ ಬಗೆಗಿನ ಅವಜ್ಞೆ ಬೇರೆ ಕಡೆ ಕಾಣೆ. ಉದಾಹರಣೆಗೆ ನನ್ನ ಸ್ನೇಹಿತರೊಬ್ಬರು ಕಂಪನಿಯೊಂದರ ಮಾರಾಟ ವಿಭಾಗದಲ್ಲಿ ಕೆಲಸ ಮಾಡುತ್ತಾರೆ. ಅವರು ಹೇಳುತ್ತಾರೆ : ತಮಿಳುನಾಡು, ಕೇರಳ, ಆಂದ್ರ ಎಲ್ಲೇ ಹೋದರೂ ಅಲ್ಲಿಯ ಕಂಪನಿಯ ಮುಖ್ಯಸ್ಥರು ನನ್ನ ಹತ್ತಿರ ಮಾತ್ರ ಇಂಗ್ಲೀಷ್ ನಲ್ಲಿ ಮಾತಾಡುತ್ತಾರೆ. ಅವರ ಸಹವರ್ತಿಗಳ ಜೊತೆಗೆ ಅವರ ಮಾತೃ ಭಾಷೆಯಲ್ಲಿಯೇ ವ್ಯವಹರಿಸುತ್ತಾರೆ. ಆದರೆ ಕರ್ನಾಟಕದಲ್ಲಿ ಮಾತ್ರ ಪರಿಸ್ಥಿತಿ ಭಿನ್ನ.
ನಾವು ಈ ವಿಷಯದಲ್ಲಿ ನಮ್ಮ ನಾಡಿನವರೇ ಆದ ತುಳು ಭಾಷಿಕರಿಂದ ಕಲಿಯಬಹುದು. ಇತ್ತೀಚಿಗೆ ಒಂದು ನಾಗಮಂಡಲ ಕಾರ್ಯಕ್ರಮದಲ್ಲಿ ಚನ್ನೈನಲ್ಲಿ ನೆಲೆಸಿರುವ ಒಂದು ತುಳು ಕುಟುಂಬವನ್ನು ಕಂಡೆ. ಚನ್ನೈನಲ್ಲೇ ಹುಟ್ಟಿ ಬೆಳೆದ ಅವರ ಮಗನಿಗೆ ತಮಿಳು ಗೊತ್ತು, ತುಳು ಗೊತ್ತು. ಕನ್ನಡ ಇಲ್ಲ. ರಾಜಾಸ್ಥಾನದಿಂದ ಬಂದು ಇಲ್ಲಿ ನೆಲೆಸಿರುವ ವ್ಯಾಪಾರಸ್ಥ ಕುಟುಂಬಗಳ ಇಲ್ಲಿಯೇ ಹುಟ್ಟಿ ಬೆಳೆದ ಮಕ್ಕಳು ರಾಜಾಸ್ಥಾನಿ ಭಾಷೆಯಲ್ಲಿಯೇ ಅವರ ವ್ಯವಹಾರದ ಲೆಕ್ಕ ಪತ್ರಗಳನ್ನು ಬರೆಯುವುದನ್ನು ನೋಡಿದ್ದೇನೆ.
ನಮ್ಮತನವನ್ನು ಉಳಿಸಿಕೊಳ್ಳಬೇಕು. ಅದು ಎಲ್ಲ ವರ್ಗದವರಿಗೂ ಆವಶ್ಯ. ನಮ್ಮ ಹೆಸರಿನ ಹಿಂದೆ ನಮ್ಮ ಊರು, ತಂದೆಯ ಹೆಸರನ್ನು ಇನಿಷಿಯಲ್ಸ್ ಎಂದು ಇಟ್ಟುಕೊಂಡಿರುತ್ತೇವೆ. ಮುಂದೆ ಪಾಸ್ ಪೋರ್ಟ್ಗೋ ವಿಸಾಕ್ಕೋ ಅದರ ವಿವರಣೆ ಕೊಡುವುದೇ ನಮಗೆ ಕಷ್ಟ ಎನ್ನುವುದಾದರೆ ಅದು ನಮ್ಮ ಬೌದ್ದಿಕ ದಿವಾಳಿತನ ಅಲ್ಲ, ಅತಿ ಬೌದ್ದಿಕತೆಯ ದುರಂತ. 

Sunday, 27 November 2011

ಇಲ್ಲಿ ಸುಮ್ಮನೆ


ಬಳ್ಳಾರಿಯಲ್ಲೀಗ ಭಾಷಣಗಳ ಭರಾಟೆ
ಛಿದ್ರವಾಗಿದೆ ಬಿ.ಜೆ.ಪಿ. ಯ ಭದ್ರ ಕೋಟೆ 
ಜನತೆಗೆ ಪುಕ್ಕಟೆ ಮದ್ಯ, ಮಾಂಸ, ಮನರಂಜನೆ 
ದಂಡಿನಲ್ಲಿ ಸೋದರಮಾವನೇ ?
ನಾಳೆ ಎಲ್ಲರೂ ಒಂದೇ :
ಬೆಂಗಳೂರು ನಮ್ಮನೆ : ಬಳ್ಳಾರಿಗೆ  ಬಂದೆ ಸುಮ್ಮನೆ. 

Wednesday, 26 October 2011

ಹಾಗೆ ಸುಮ್ಮನೆ

 ದೀಪಾವಳಿ : ಒಂದು ಕಾಲದಲ್ಲಿ ಜಗತ್ತೆಲ್ಲಾ ಕಗ್ಗತ್ತಲಲ್ಲೇ ಇತ್ತು.  ದೀಪ  ಹಚ್ಚುವುದೇ ಸಂಭ್ರಮ. ಇಂದು ನಗರಗಳು ರಾತ್ರಿಗೂ ಹಗಲಿಗೂ ವ್ಯತ್ಯಾಸ ಕಾಣದಷ್ಟು ಜಗಮಗಿಸುತ್ತಿವೆ. ಬೆಳಕು ಹಾಗು ಶಬ್ದ ಎರಡರ ಆರ್ಬಟವು ಜಾಸ್ತಿ. ಈಗಲೂ  ದೀಪ  ಹಚ್ಚಿ ಪಟಾಕಿ ಹೊಡೆಯುವುದೇ ಹಬ್ಬವೇ?                                                                         
ಹಳೆಯ ಚಿತ್ರ ಗೀತೆಯೊಂದು ನೆನಪಾಗುತ್ತಿದೆ : " ಕಡಿದು ಸುತ್ತಮುತ್ತಲಿದ್ದ ಗೊಂಡಾರಣ್ಯ ಸ್ಥಾಪಿಸಿದನು ವಿಜಯನಗರ ವಿದ್ಯಾರಣ್ಯ " ಅದು ಅಂದಿನ ಅಗತ್ಯ : ಕಾಡನ್ನು ಕಡಿದು ನಾಡನ್ನು ಕಟ್ಟುವುದು. ಆದರೆ ಇಂದು ಕಾಡನ್ನು ಬೆಳೆಸುವುದು ಮುಖ್ಯ. ಆದರೆ ನಾವು ಕಾಲದ  ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದೆವೆಯೇ?
ಹಬ್ಬ: ದಿನ ನಿತ್ಯದ ಯಾಂತ್ರೀಕೃತ ಬದುಕಿಗೊಂದು ಬದಲಾವಣೆ. ಮತ್ತೆ ಮರು ಚೈತನ್ಯ ಪಡೆದು ದೈನಂದಿನ ಬದುಕಿಗೆ ಅಣಿಯಾಗುವುದು. ನಾನು ಯಾವಾಗಲು ವ್ಯವಹರಿಸುವ ಒಬ್ಬ ಗುಜರಾತಿ ಸೇಟು ಯಾರನ್ನೋ ರೇಗಿಸುತ್ತಿದ್ದ. " ನಾವು ಹಬ್ಬ ಅಂದರೆ ಉಪವಾಸ ಮಾಡುತ್ತೇವೆ. ನೀವು ಚೆನ್ನಾಗಿ ತಿಂದು ಮಲಗಿಬಿಡುತ್ತೀರ ? " ನಿತ್ಯ ಸುಖ ಭೋಜನ ಸವಿಯುವವನು ಉಪವಾಸ ಮಾಡುತ್ತಾನೆ. ನಿತ್ಯ ಅರೆ ಹೊಟ್ಟೆ ತಿಂದು ಹಗಲೆಲ್ಲಾ ಗೇಯುವವನು ಒಂದು ದಿನ ಹೊಟ್ಟೆ ತುಂಬಾ ಉಂಡು ಮೋಜು ಅನುಬವಿಸುತ್ತಾನೆ.
ದರ್ಮಗಳು, ಶಾಸ್ತ್ರಗಳು, ಆಚರಣೆಗಳು, ಯಾವಾಗಲೂ ಕಾಲದ ಅಗತ್ಯಕ್ಕೆ ತಕ್ಕಂತೆಯೇ ಇರಬೇಕು, ಇರುತ್ತಿದ್ದವು. ಇಲ್ಲದಿದ್ದರೆ ಅವು ಕಂದಾಚಾರ ಎನಿಸಿಕೊಳ್ಳುತ್ತವೆ. ಇತ್ತೀಚೆಗೊಮ್ಮೆ ಜಗತ್ತು ಆರ್ಥಿಕ ಕುಸಿತಕ್ಕೆ ಒಳಗಾಯಿತು. ನಾಳಿನ ಯೋಚನೆ ಮಾಡದೇ ಅತಿಯಾಗಿ ಅನುಭವಿಸುವ ಮನುಷ್ಯನ ಚಾಳಿಯೆ ಅದಕ್ಕೆ ಕಾರಣ. ಅದಕ್ಕೆ ಪರಿಹಾರ ಕಂಡು ಹಿಡಿಯಲು ಅರ್ಥ ಶಾಸ್ತ್ರಜ್ಞರು, ವಿಶ್ಲೇಷಕರು ಒದ್ದಾಡಿದರು.  ಎಲ್ಲಾ ಗ್ರಾಹಕ ವಸ್ತುಗಳ ಮಾರಾಟ ಕಡಿಮೆಯಾಯಿತು. ಕಾರುಗಳು ಷೆದ್ದುಗಳಲ್ಲಿ ಉಳಿದವು. ಮಾರಾಟ ಕಡಿಮೆಯಾಯಿತು. ಜನ ಸಾರ್ವಜನಿಕ ಸಾರಿಗೆಗಳನ್ನು ಉಪಯೋಗಿಸಲು ಆರಂಬಿಸಿದರು.  ಇದು  ಒಂದು ತರಹದಲ್ಲಿ ಒಳ್ಳೆಯದೇ ಅಲ್ಲವೇ? ಅಷ್ಟು ಮಟ್ಟಿಗೆ ಪೆಟ್ರೋಲಿಯಂ ಉತ್ಪನ್ನಗಳ  ಕಡಿಮೆಯಾಯಿತು. ಮಾಲಿನ್ಯ ಕಡಿಮೆಯಾಯಿತು ಅಲ್ಲವೇ? ಇಲ್ಲ. ಮಾರುಕಟ್ಟೆಯನ್ನು ಮತ್ತೆ ಮೊದಲಿನ ಸ್ಥಿತಿಗೆ ತರಲು ಪ್ಯಾಕೇಜುಗಳನ್ನು ಘೋಷಿಸಲಾಯಿತು. ಜನ ಹೆಚ್ಚು ಹೆಚ್ಚು ವ್ಯಾಪಾರ ಮಾಡಬೇಕು. ಹೆಚ್ಚು ತಿನ್ನಬೇಕು. ಹೆಚ್ಚು ಕುಡಿಯಬೇಕು. ಹೆಚ್ಚು ಓಡಾಡಬೇಕು. ಇದು ಕಾಲದ ಅಗತ್ಯವೇ? 
ಬಸ್ಮಾಸುರ ತನ್ನ ಸುಡುವ ಕೈಗಳನ್ನು ಎತ್ತಿ ನಮ್ಮತ್ತ ಬರುತ್ತಿದ್ದರೆ ನಾವು ಅವನನ್ನು ನಿಗ್ರಹಿಸುವ ಬದಲು ಅವನದೇ ತರದ ಕೈಗಳನ್ನು ಹೊಂದಲು ಹಾತೊರೆಯುತ್ತಿದ್ದೇವೆ. ಪ್ರಾಕೃತಿಕ ಸಂಪನ್ಮೂಲಗಳು ಇನ್ನೇನು ಕೆಲವೇ ವರ್ಷಗಳಲ್ಲಿ ಕಾಲಿಯಗುತ್ತವೆ ಎಂಬ ಎಚ್ಚರಿಕೆ ಇದೆ. ಆದರು ನಮಗೆ ಎಚ್ಚರವಿಲ್ಲ. .. 
ಕತ್ತಲ ರಾತ್ರಿಗಳಲ್ಲಿ ಅಂದು ಪಂಜಿನ ಮೆರವಣಿಗೆ ಮಾಡಿ ಸಾಂಕೇತಿಕವಾಗಿ ಪ್ರತಿಬಟನಾ ಮೆರವಣಿಗೆಗಳು ನಡೆಯುತ್ತಿದ್ದವು. ಕತ್ತಲಲ್ಲಿ ನೂರಾರು ಪಂಜುಗಳು, ಘೋಷಣೆಗಳು ಜನರಿಗೆ ಸಂದೇಶ ನಿಡುತ್ತಿದ್ದವು. ಇಂದು ಜಗಮಗಿಸುವ ನಗರಗಳಲ್ಲಿ ಅದೇ ಪುನರಾವರ್ತನೆ. ನಾವು ಕ್ರಿಯೆಗಳ ಸಂಕೇತಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದೆವೆಯೇ? 
ಇರಲಿ. ಹಬ್ಬಗಳನ್ನು ಸಾಂಕೇತಿಕವಾಗಿ ಆಚರಿಸೋಣ. ಕಡಿಮೆ ದೀಪ ಹಚ್ಚೋಣ. ಕಡಿಮೆ ಪಟಾಕಿ ಹೊಡೆಯೋಣ.  ಎಲ್ಲರಿಗೂ ಶುಭವಾಗಲಿ...........

Saturday, 22 October 2011

NAMANA

ಇಂದಿನ ಗಾಂಧಿ ಅಣ್ಣಾಗೆ ನಮನ ಹಜಾರು 
ರಾಜಕಾರಣಿಗೆ ಆಗಿದೆ ದಾರಿ ಇಳಿಜಾರು 
ಬ್ರಷ್ಟರೆಲ್ಲಾ ಒಟ್ಟಿಗೆ ಸೇರಿ ಲೂಟಿ ಜೋರು 
ಬಡ ಜನತೆಗೆ ಗತಿ ಒಂದೇ, ದೇವರು. !