Wednesday, 24 July 2013

(ಅಮ್ಮ ಹೊರಟು ಹೋಗಿ ಎರಡು ತಿಂಗಳು...... [ ಜ್ಯೇಷ್ಠ ಶುದ್ಧ ಚತುರ್ದಶಿ. ಜೂನ್ 22] )
ಏಪ್ರಿಲ್ ನ ರವರವ ಬಿಸಿಲು ಅಮ್ಮನ ಬಲಗಾಲಿನ ಮೇಲೆ ಬೀಳುತ್ತಿತ್ತು. ಸಾಲದ್ದಕ್ಕೆ ನನ್ನ ಕೈಲಿದ್ದ ಮಡಕೆಯಲ್ಲಿನ ಬೆಂಕಿಯ ಶಾಖ ಬೇರೆ. ಕಾಲುಗಳನ್ನು ಮಡಚಿ ನೆರಳಿಗಿಡುವ ಅನಿಸುತ್ತಿತ್ತು. ಆದರೆ ದೇಹವನ್ನು ಚಟ್ಟಕ್ಕೆ ಹಗ್ಗದಿಂದ ಬಿಗಿಯಲಾಗಿತ್ತು. ಈ ಕಾಲುಗಳನ್ನು ನಾನು ಸಣ್ಣಲ್ಲಿಂದ ನೋಡಿಕೊಂಡು ಬಂದಿದ್ದೇನೆ. ಹಾಗೆಂದು ನಾನು ಆಗಾಗ್ಗೆ ಅಮ್ಮನ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವ ಅಭ್ಯಾಸದವನಲ್ಲ. (ಒಂದು ವಾರದ ಮೊದಲು ಯುಗಾದಿಗೆ ಊರಿಗೆ ಹೋಗಿ ಹೊರಡುವ ಮೊದಲು ಅಮ್ಮನ ಹತ್ತಿರ ಹೋಗಿ ಬರುತ್ತೇನೆ ಎಂದು ಹೇಳಲೂ ಸಾಧ್ಯವಾಗಿರಲಿಲ್ಲ. ನಾನು ಹೊರಡುವ ಸಮಯದಲ್ಲಿ ಅವಳು ಮಲಗಿದ್ದಳು. ಅವಳನ್ನು ಎಬ್ಬಿಸುವ ಮನಸ್ಸಾಗದೇ ಹಾಗೇ ಬಂದಿದ್ದೆ. ಕಡೆಗೂ ಅವಳು ನನಗೆ ಹೇಳದೇ ಹೋಗಿಬಿಟ್ಟಳು) ಅಥವಾ ಅಮ್ಮ ತನ್ನ ಕಾಲುಗಳಿಂದ ನನ್ನ ಒದ್ದೂ ಇಲ್ಲ. ನಾನು ಚಿಕ್ಕವನಿದ್ದಾಗ ಅಮ್ಮನ ಸೀರೆಯ ನೆರಿಗೆಯನ್ನು ಕಾಲ ಬುಡದಲ್ಲಿ ಕುಳಿತು ಸರಿಪಡಿಸಿದ ನೆನಪು; ಅಮ್ಮನ ಕಾಲುಂಗುರವನ್ನು ಹಾಕುವುದಕ್ಕೋ, ತೆಗೆಯುವುದಕ್ಕೋ, ಸರಿಪಡಿಸುವುದಕ್ಕೋ, ಅಥವಾ ಸುಮ್ಮನೆ ಹಾಗೇ ಕಾಲುಂಗುರವನ್ನು ಆಡಿಸಿದ ನೆನಪು ; ಅವಳಿಗೆ ಬೆನ್ನು ನೋವು ಅತಿಯಾದಾಗ ಅವಳ ಬೆನ್ನ ಮೇಲೆ ನನ್ನ ಕಾಲುಗಳಿಂದ ತುಳಿದ ನೆನಪು; ಕಾಲು ನೀಡಿ ಕೂತು ಹೂ ಕಟ್ಟುತ್ತಲೋ, ಓದುತ್ತಲೋ, ಬತ್ತಿ ಹೊಸೆಯುತ್ತಲೋ ಇದ್ದಾಗ ಆ ಕಾಲುಗಳನ್ನು ನೋಡಿದ ನೆನಪು. ನನ್ನನ್ನು ಊಟಕ್ಕೆ ಕೂರಿಸಿ ತಾನು ಬಡಿಸುತ್ತಾ, ನನ್ನ ಪಕ್ಕ ನಿಂತಾಗ ಆಕೆಯ ಕಾಲುಗಳನ್ನು ನೋಡಿದ ನೆನಪು; ತೀರಾ ಇತ್ತೀಚೆಗೆ ಕಳೆದ ವರ್ಷ ಯಡಿಯೂರಪ್ಪನವರ ರಾಜೀನಾಮೆ ಷೋ ನಡೆಯುತ್ತಿದ್ದಾಗ ತಿ. ನರಸೀಪುರದ ನಮ್ಮ ಮನೆಯ ಕುರ್ಚಿಯ ಮೇಲೆ ಕುಳಿತು, ಸೋಫಾದ ಮೇಲೆ ಕಾಲು ನೀಡಿ ಟಿ.ವಿ. ನೋಡುತ್ತಾ ( ಹಾಗೆ ಆರಾಮಾಗಿ ಕುಳಿತುಕೋ ಎಂದು ನಾನೇ ಆಕೆಗೆ ಹೇಳಿದ್ದೆ ; ಆದರೂ ನಾನು ಹೋದ ತಕ್ಷಣ ಆಕೆ ಕಾಲುಗಳನ್ನು ಕೆಳಗಿಳಿಸುತ್ತಿದ್ದಳು ) ಬತ್ತಿ  ಹೊಸೆಯುತ್ತಾ " ಅಲ್ಲ ಯಡಿಯೂರಪ್ಪ ರಾಜೀನಾಮೆ ಕೊಡೋದೇ ಇಲ್ವಂತಲ್ಲ ಮಾರಾಯ "  ಎಂತಲೋ ಇನ್ನೇನೋ ಹೇಳಿ ಆ ಕ್ಷಣದ ಸುದ್ದಿಯನ್ನು ಅಪ್ ಡೇಟ್ ಮಾಡಿದ ನೆನಪು.. ..
ನನ್ನ ಕಣ್ಣುಗಳಿಂದ ಬೀಳುತ್ತಿದ್ದ ಹನಿಗಳಿಗೂ ಅಮ್ಮನ ಪಾದದ ಬಿಸಿಯನ್ನು ಆರಿಸುವ ಭಾಗ್ಯವಿರಲಿಲ್ಲ.... ಏಕೆಂದರೆ ಅಮ್ಮನ ಆ ಕಾಲು ಆ ಕ್ಷಣ ನನ್ನ ಕಣ್ಣೀರ ಪರಿಧಿಯಿಂದ ಆಚೆ ತೀರದಲ್ಲಿತ್ತು............
(ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದು ಇಲ್ಲಿ ಈಗ ಪ್ರಕಟಿಸುತ್ತಿದ್ದೇನೆ.)
ಅಮ್ಮ ಕಾಲವಾಗಿ ಇಂದಿಗೆ ಮೂರು ತಿಂಗಳು. ನೆನಪುಗಳು ಮಳೆಯ ಜೊತೆಗೇ ಸುರಿಯುತ್ತವೆ. ನಾವು ಮನಸ್ಸು ಕೊಡಬೇಕಷ್ಟೆ. ...... ಅಮ್ಮ ಹೋದ ದಿನ ಅಲ್ಲಿ ಸೇರಿದವರು-ವಿಶೇಷವಾಗಿ ನಮ್ಮೂರ ಜನ- ತೋರಿದ ಸಹಕಾರ ಮರೆಯುವಂಥದ್ದಲ್ಲ. ಹಳ್ಳದ ಈಚೆ ಕಡೆ ಬಿಳುವಿನಕೊಪ್ಪ ಮತ್ತು  ರಾಮಸ್ವಾಮಿ ಮನೆಯಿಂದ ಪ್ರಾರಂಭಿಸಿ ಆಚೆ ಕಡೆ ಪುರುಷೋತ್ತಮ, ಕಮ್ಮಕ್ಕಿ ರವಿ ಮನೆಯವರವರೆಗೆ - ಜನ ತೊರಿದ ಸಹಕಾರ ಮರೆಯುವಂಥದ್ದಲ್ಲ. ನನ್ನ ಸ್ನೇಹಿತ ನಾರಾಯಣ್ "ನೀವು ಆ ಸಂಬಂದವನ್ನು ಉಳಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ " ಎಂದು ಹೇಳುತ್ತಿದ್ದರು..  ಅದು ಅಮ್ಮಗಳಿಸಿದ ವಿಶ್ವಾಸವೇ? ನನ್ನ ತಮ್ಮಂದಿರು-ಉಮೇಶ, ರವಿ- ಸಂಪಾದಿಸಿದ್ದೇ ? ಅಥವಾ ಅಮ್ಮನ ಭಾಷೆಯಲ್ಲಿ ಹೇಳುವುದಾದರೆ ಪೂರ್ವಾರ್ಜಿತ ಪುಣ್ಯವೇ?  ಎಲ್ಲವೂ ಹೌದಿರಬಹುದು. ಆದರೆ ನನ್ನ ಪ್ರಕಾರ  ಅದಕ್ಕಿಂತ ಮುಖ್ಯವಾಗಿ ಅದು ನಮ್ಮೂರಿನ-ಹೊಕ್ಕಳಿಕೆಯ-ಗುಣ ವಿಶೇಷ. ನಮ್ಮ ನಮ್ಮಲ್ಲಿ ಭಿನ್ನಾಭಿಪ್ರಾಯವಿಲ್ಲವೆಂದಲ್ಲ. ಆದರೆ ಕಷ್ಟ-ಸುಖದಲ್ಲಿ ಅದನ್ನೆಲ್ಲ ಲೆಕ್ಕ ಹಾಕುತ್ತಾ ಯಾರೂ ಕುಳಿತುಕೊಳ್ಳುವುದಿಲ್ಲ. ನಮ್ಮೂರಿನವರು ಪರಸ್ಪರ ತೋರಿಸುವ ಆಸ್ಥೆಯೇ ಅಂಥದ್ದು. ಅಮ್ಮ ತೀರಿಕೊಂಡದ್ದು ಬೆಳಿಗ್ಗೆ ಸುಮಾರು ಹತ್ತು ಗಂಟೆಯ ಹೊತ್ತಿಗೆ. ಅಂತ್ಯ ಕ್ರಿಯೆ ಶುರುವಾದದ್ದು ಮರುದಿನ ಬೆಳಿಗ್ಗೆ. ಸುಮಾರು ಇಪ್ಪತ್ತನಾಲ್ಕು ಗಂಟೆಗಳ ಕಾಲ ನಮ್ಮ ಮನೆಯಲ್ಲಿ  ನಮ್ಮ ಊರಿನ ಹಲವಾರು ಜನ ಇದ್ದೇ ಇರುತ್ತಿದ್ದರು- ಶಿಫ್ಟಿನ ಮೇಲೇನೋ ಎಂಬಂತೆ. ಅದರಲ್ಲೂ ರಾತ್ರಿ ಅಮ್ಮನನ್ನು ಕಾಯುತ್ತಾ ಕೂರುವ ......... ಏನೆಂದು ಹೇಳಲಿ ಅಂಥ ಕೆಲಸಕ್ಕೆ ನಮ್ಮೂರಿನ ಸುಮಾರು ಹತ್ತು ಹದಿನೈದು ಜನ ರಾತ್ರಿ ಇಡೀ ಕಣ್ಣು ಮುಚ್ಚದೇ  ಅದೂ ಇದೂ ಮಾತಾಡುತ್ತಾ ಕೂತೇ ಇದ್ದರು. ಅದರಲ್ಲೂ ಪುರುಷೋತ್ತಮ, ಪ್ರಭಾಕರ ನಂಥ ಹಿರಿಯರು ಕೂತದ್ದು ನಾನು ಮರೆಯಲಾರೆ. ಜೊತೆಗೆ ಮಾಧವ ಮಾವ ರಾತ್ರಿ ಇಡೀ ಕಣ್ಣು ಮುಚ್ಚದೇ ಕೂತಿದ್ದ..... ಬೆಳಗಾಯಿತು.....ಆಗಲೇ ಬೇಕು..... ಆದರೆ, ಎಂದಿನಂತೆ ನಾವು ಏಳುವ ಹೊತ್ತಿಗೆ ಮುಚೆಕಡೆ ಗುಡಿಸುತ್ತಲೋ, ಹೂ ಕುಯ್ಯುತ್ತಲೋ, ಮಕ್ಕಳಿಗೆ ಮುಖ ತೊಳೆಸುತ್ತಲೋ ಯಾವುದೋ ಬಾಗಿಲಲ್ಲಿ ಕಾಣುತ್ತಿದ್ದ ಅಮ್ಮನ  ಮುಖ ಇನ್ನು ಕಾಣುವಂತಿರಲಿಲ್ಲ.... ಸಣ್ಣವನಿದ್ದಾಗ ಬೆಳಿಗ್ಗೆ ಅರೆ ನಿದ್ರೆಯಲ್ಲಿ, ಅಮ್ಮ ರೇಡಿಯೋದಲ್ಲಿ ಕೇಳಿಸುತ್ತಿದ್ದ ಭಕ್ತಿ ಗೀತೆಗಳೇ ಈಗಲೂ ನನ್ನ ಅತ್ಯಂತ ಅಚ್ಚುಮೆಚ್ಚು. ಅವುಗಳ ಸಂಗೀತದ ಕಾರಣಕ್ಕೋ, ಅಥವಾ ಸಾಹಿತ್ಯದ ಕಾರಣಕ್ಕೋ ಅಲ್ಲ. ಅವುಗಳನ್ನು ನಾನು ಕೇಳಿದ್ದ ಕಾಲದ ನೆನಪನ್ನು ಹೊತ್ತು ತರುವ ಕಾರಣಕ್ಕೆ...... ಪ್ರಭಾಕರ ಬಂದು " ಸ್ನಾನ ಮಾಡಿ" ಎಂದ. ಊರವರು ಒಬ್ಬೊಬ್ಬರಾಗಿ ಬರಲು ಪ್ರಾರಂಭಿಸಿದರು....... ನಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೆ ಜನ ಸೇರಿದಾಗ ನಮ್ಮ ತಪ್ಪುಗಳನ್ನು ಹುಡುಕಿ ಗದರುತ್ತಿದ್ದ ಅಮ್ಮ ಇರಲಿಲ್ಲ......